LATEST NEWS
ಅನಾಥ ಸಂಸ್ಥೆಯಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿ ಬಂಧನ
ಅನಾಥ ಸಂಸ್ಥೆಯಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿ ಬಂಧನ
ಉಡುಪಿ ಮಾರ್ಚ್ 16: ಬಿಹಾರದ ಬಾಲಿಕಾ ಗೃಹದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ರೀತಿಯ ಪ್ರಕರಣವೊಂದು ಉಡುಪಿಯಲ್ಲಿ ನಡೆದಿದೆ. ಉಡುಪಿಯ ತೆಕ್ಕಟ್ಟೆ- ಕೆದೂರಿನ ಸ್ಫೂರ್ತಿಧಾಮ ಸಂಸ್ಥೆಯಲ್ಲಿದ್ದ ಅನಾಥ ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಲೈಂಗಿಕ ದೌರ್ಜನ್ಯದ ಆರೋಪದಡಿ ಸ್ಥಳೀಯ ನೂಜಿಯ ನಿವಾಸಿ ಹನುಮಂತ ಹಾಗೂ ಸಂಸ್ಥೆಯ ಮುಖ್ಯಸ್ಥ ಕೇಶವ ಕೋಟೇಶ್ವರನನ್ನು ಪೊಲೀಸರು ಬಂಧಿಸಿದ್ದಾರೆ.
ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬಿಹಾರದ ಬಾಲಿಕಾ ಗೃಹದ ಲೈಂಗಿಕ ದೌರ್ಜನ ಪ್ರಕರಣ ರೀತಿ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ತೆಕ್ಕಟ್ಟೆ- ಕೆದೂರಿನ ಸ್ಫೂರ್ತಿಧಾಮದಿಂದ ತಪ್ಪಿಸಿಕೊಂಡ ಬಾಲಕಿಯೋರ್ವಳು ಮಾರ್ಚ್ 13ರಂದು ಸಾಸ್ತಾನದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿ ಕೋಟ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು . ಈ ಹಿನ್ನಲೆಯಲ್ಲಿ ಪೊಲೀಸರು ಬಾಲಕಿಯನ್ನು ಕರೆದುಕೊಂಡು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಬಾಲಕಿ ಸ್ಪೂರ್ತಿ ಧಾಮದ ಲೈಂಗಿಕ ದೌರ್ಜನ್ಯದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾಳೆ.
ಈ ಹಿನ್ನಲೆಯಲ್ಲಿ ಕೋಟ ಪೊಲೀಸರು ಪ್ರಕರಣವನ್ನು ಉಡುಪಿ ಮಹಿಳಾ ಠಾಣೆಗೆ ಹಸ್ತಾಂತರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಉಡುಪಿ ಮಹಿಳಾ ಪೊಲೀಸ್ ಠಾಣೆ ಯ ಪೊಲೀಸರು ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ಹನುಮಂತನನ್ನು ವಶಕ್ಕೆ ಪಡೆದರು. ಪ್ರಕರಣದ ತನಿಖೆಗಾಗಿ ಸ್ಫೂರ್ತಿಧಾಮಕ್ಕೆ ಭೇಟಿ ನೀಡಿ ಆರೇಳು ಬಾಲಕಿಯರನ್ನು ವಿಚಾರಿಸಿದರು. ಅವರ ಮೇಲೂ ದೌರ್ಜನ್ಯ ನಡೆಸಿರುವ ಮಾಹಿತಿ ತಿಳಿದು ಬಂದಿದೆ. ಅದರಲ್ಲಿ ಒಬ್ಬ ಬಾಲಕಿ ಕೇಶವ ಕೋಟೇಶ್ವರ ಕೂಡ ದೌರ್ಜನ್ಯ ಎಸಗಿದ್ದಾನೆ ಎಂದ ಆರೋಪಿಸಿದ ಹಿನ್ನಲೆಯಲ್ಲಿ ತಡರಾತ್ರಿ ಆತನನ್ನೂ ಬಂಧಿಸಲಾಯಿತು.
ಪ್ರಕರಣ ಬೆಳಕಿಗೆ ಬಂದ ಬಗೆ
ಸಂತ್ರಸ್ಥೆ ಬಾಲಕಿ ಅನಾಥೆಯಾಗಿದ್ದು ಆಕೆ ಹಲವು ವರ್ಷಗಳಿಂದ ಸ್ಫೂರ್ತಿ ಧಾಮದಲ್ಲಿ ವಾಸವಿದ್ದರು. ಇತ್ತೀಚೆಗೆ ಮಂಗಳೂರಿನ ಕುಟುಂಬವೊಂದು ಸಂತ್ರಸ್ಥೆ ಬಾಲಕಿಯನ್ನು ದತ್ತು ಪಡೆದಿದ್ದರು. ಆದರೆ ಆರೋಗ್ಯದ ಸಮಸ್ಯೆಯಿಂದ ಆಕೆ ಮತ್ತೆ ಸ್ಫೂರ್ತಿಗೆ ವಾಪಸಾಗಿದ್ದಳು.
ಇಲ್ಲಿ ಸ್ಥಳೀಯ ವ್ಯಕ್ತಿ ಹನುಮಂತ ಎಂಬಾತ ಮೊದಲಿನಿಂದ ಲೈಂಗಿಕ ದೌರ್ಜನ್ಯ ನೀಡುತ್ತಿದ್ದು ಅದನ್ನು ಮುಂದುವರಿಸಿದ್ದ. ಇದರಿಂದ ಬೆದರಿದ ಆಕೆ ದತ್ತು ಪಡೆದವರ ಬಳಿಗೆ ಮತ್ತೆ ತೆರಳಲು ನಿಶ್ಚಯಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದಳು ಎಂಬ ವಿಚಾರ ತಿಳಿದುಬಂದಿದೆ.
ಆರೋಪಿ ಹನುಮಂತ ಸಂಬಂಧಿಯೊಬ್ಬರು ಈ ಸ್ಪೂರ್ತಿಧಾಮದಲ್ಲಿ ಕೆಲಸ ಮಾಡುತ್ತಿದ್ದ ಹಿನ್ನಲೆಯಲ್ಲಿ ಆರೋಪಿ ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದ ಹಾಗೂ ಮಕ್ಕಳಿಗೆ ಚಾಕಲೇಟ್, ತಿಂಡಿ ನೀಡಿ ಪರಿಚಯ ಮಾಡಿಕೊಂಡಿದ್ದ. ರಾತ್ರಿ ವೇಳೆ ಕದ್ದು-ಮುಚ್ಚಿ ಕಿಟಕಿಯ ಮೂಲಕ ಒಳಪ್ರವೇಶಿಸಿ ದೌರ್ಜನ್ಯ ಎಸಗುತ್ತಿದ್ದ. ಸಂಸ್ಥೆಯವರಿಗೆ ಈ ವಿಚಾರ ತಿಳಿದಾಗ ಆತನನ್ನು ತರಾಟೆಗೆ ತೆಗೆದುಕೊಂಡು ರಾಜಿ ಮೂಲಕ ಪ್ರಕರಣ ಇತ್ಯರ್ಥಕ್ಕೆ ಪ್ರಯತ್ನಿಸಿದ್ದರು ಎನ್ನಲಾಗಿದೆ. ತನಿಖೆ ವೇಳೆ ಇನ್ನಷ್ಟು ವಿಚಾರಗಳು ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಫೂರ್ತಿಧಾಮದಲ್ಲಿರುವ 22 ಮಕ್ಕಳನ್ನು (16 ಬಾಲಕರು, 6 ಬಾಲಕಿಯರು) ಜಿಲ್ಲಾಡಳಿತದ ನಿರ್ದೇಶನದಂತೆ ಉಡುಪಿ ನಿಟ್ಟೂರಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ರಕ್ಷಣೆ ನೀಡಲಾಗಿದೆ. ದತ್ತು ಮಕ್ಕಳನ್ನು ಸಂತೆಕಟ್ಟೆಯಲ್ಲಿನ ದತ್ತು ಕೇಂದ್ರಗಳಿಗೆ ಕಳುಹಿಸಲಾಗಿದೆ.