DAKSHINA KANNADA
ಸುರತ್ಕಲ್, ನಂತೂರು ಹೆದ್ದಾರಿ ಗುಂಡಿ ಮುಚ್ಚಲು, ಕೂಳೂರು ಸೇತುವೆ ಕಾಮಗಾರಿ ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಡೆಡ್‌ಲೈನ್..!
ಮಂಗಳೂರು : ಸುರತ್ಕಲ್, ನಂತೂರು ಹೆದ್ದಾರಿ ಗುಂಡಿ ಮುಚ್ಚಲು, ಕೂಳೂರು ಹೊ ಸೇತುವೆ ಕಾಮಗಾರಿ ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹೆದ್ದಾರಿ ಪ್ರಾಧಿಕಾರಕ್ಕೆ ಡೆಡ್‌ಲೈನ್ ನೀಡಿದೆ.
ಸುರತ್ಕಲ್ – ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಬೃಹತ್ ಗಾತ್ರದ ಗುಂಡಿಗಳು ದೊಡ್ಡ ಸಂಖ್ಯೆಯಲ್ಲಿ ಬಿದ್ದಿದ್ದು ವಾಹನ ಸಂಚಾರ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಈಗಾಗಲೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಹಲವು ಅಪಘಾತಗಳು ನಡೆದು, ಪ್ರಾಣಹಾನಿಗಳು ಉಂಟಾಗಿವೆ. ಕೆಲವೆಡೆ ರಸ್ತೆ ಪೂರ್ತಿ ಆಳವಾದ ಗುಂಡಿಗಳೇ ತುಂಬಿದ್ದು, ವಾಹನಗಳು ಸರಾಗವಾಗಿ ಚಲಿಸಲಾಗದೆ ಮೈಲುಗಳಷ್ಟು ಉದ್ದಕ್ಕೆ ಟ್ರಾಫಿಕ್ ಜಾಮ್ ಪ್ರತಿದಿನ ಸಂಭವಿಸುತ್ತಿದೆ.
ಮಳೆಗಾಲಕ್ಕೂ ಮುನ್ನ ಈ ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ ನಡೆಸದಿರುವುದು, ವರ್ಷಗಳಿಂದ ಸರಿಯಾಗಿ ಮೈಂಟನೆನ್ಸ್ ಮಾಡದಿರುವುದು ರಸ್ತೆ ಈ ರೀತಿ ಸಂಚಾರಕ್ಕೆ ಆಯೋಗ್ಯಗೊಳ್ಳಲು ಪ್ರಧಾನ ಕಾರಣ. ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಕೇರಳ, ಗೋವಾ, ಮುಂಬೈ ಸಂಪರ್ಕದ ಅತ್ಯಂತ ಪ್ರಮುಖ ಹೆದ್ದಾರಿಯ ಪ್ರಧಾನ ಭಾಗವಾಗಿರುವ, ಅತಿ ಹೆಚ್ಚು ಸಂಚಾರ ದಟ್ಟಣೆಯ ನಂತೂರು, ಸುರತ್ಕಲ್ ಭಾಗವನ್ನು ಕಡೆಗಣಿಸಿರುವುದು ಖೇದಕರ. ಕಳೆದ ನಾಲ್ಕು ತಿಂಗಳುಗಳಲ್ಲಿ ರಸ್ತೆಗುಂಡಿಗಳಿಂದ ಉಂಟಾದ ಅಪಘಾತಗಳಿಗೆ ಹಲವು ಜೀವಗಳು ಬಲಿಯಾಗಿದ್ದರೂ ಸ್ಥಳೀಯ ಶಾಸಕರು, ಸಂಸದರು ಹೆದ್ದಾರಿ ದುರವಸ್ಥೆಯ ಕುರಿತು ಗಮನ ಹರಿಸದಿರುವುದು ಖಂಡನೀಯ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣವೇ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಹಾಗೂ ನಂತೂರು- ಸುರತ್ಕಲ್ ಹೆದ್ದಾರಿಯನ್ನು ಪೂರ್ಣ ಪ್ರಮಾಣದ ದುರಸ್ತಿಗೆ ಮಳೆಗಾಲದ ತರುವಾಯ ಮುಂದಾಗಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸುತ್ತದೆ.
ಕಾಲಮಿತಿಯ ಒಳಗಡೆ ತುರ್ತಾಗಿ ಕೂಳೂರು ಹೊಸ ಸೇತುವೆ ಕಾಮಗಾರಿ ಪೂರ್ತಿಗೊಳಿಸಲು ಒತ್ತಾಯ
ಇದೇ ಹೆದ್ದಾರಿಯ ಭಾಗವಾಗಿರುವ “ಕೂಳೂರು ಹಳೆಯ ಸೇತುವೆ ಸಂಚಾರಕ್ಕೆ ಅನರ್ಹ ಗೊಂಡು ಕುಸಿಯುವ ಸಾಧ್ಯತೆ ಇದೆ, ಈ ಸೇತುವೆಯ ಮೇಲೆ ವಾಹನ ಸಂಚಾರ ನಿರ್ಬಂಧಿಸಬೇಕು” ಎಂದು ಹೆದ್ದಾರಿ ಪ್ರಾಧಿಕಾರದ ತಜ್ಞರು ವರದಿ ನೀಡಿ ಆರು ವರ್ಷ ದಾಟಿದೆ. ಈ ನಡುವೆ ಹೊಸ ಸೇತುವೆ ನಿರ್ಮಾಣದ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷಗಳಾದರೂ ಇನ್ನೂ ಪಿಲ್ಲರ್ ಗಳ ನಿರ್ಮಾಣ ಪೂರ್ಣಗೊಂಡಿಲ್ಲ. ತೀರಾ ಕುಂಟುತ್ತಾ ಸಾಗಿರುವ ಸೇತುವೆ ನಿರ್ಮಾಣ ಕಾಮಗಾರಿ ಈಗ ಪೂರ್ತಿ ಸ್ಥಗಿತಗೊಂಡಿದೆ. ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧ ಪಟ್ಟ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಈ ಸ್ಥಿತಿ ಉಂಟಾಗಿದೆ.
ಆರು ವರ್ಷಗಳ ಹಿಂದೆಯೇ ಹಳೆಯ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸುವಂತೆ ಜಿಲ್ಲಾಡಳಿತಕ್ಕೆ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದ್ದರೂ, ಉಡುಪಿ -ಮಂಗಳೂರು ನಡುವೆ ಸಂಚಾರ, ಸಂಪರ್ಕ ಪೂರ್ತಿ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ, ಹಾಗೂ ಹೊಸ ಸೇತುವೆ ನಿರ್ಮಾಣದ ನಂತರವೇ ಹಳೆಯ ಸೇತುವೆ ಮುಚ್ಚಬೇಕು ಎಂಬ ನಾಗರಿಕ ಸಮಾಜದ ಆಗ್ರಹದಿಂದಾಗಿ ಹಳೆಯ ಸೇತುವೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಒದಗಿಸಲಾಗಿದೆ.
ಈಗಂತೂ ಹಳೆಯ ಸೇತುವೆ ಮತ್ತಷ್ಟು ದುರ್ಬಲಗೊಂಡು ಯಾವುದೇ ಕ್ಷಣ ಕುಸಿಯುವ ಭೀತಿ ಎದುರಾಗಿದೆ. ಜಿಲ್ಲಾಡಳಿತ ಸೇತುವೆ ಮುಚ್ಚುವ ಕುರಿತು ಆಲೋಚಿಸುತ್ತಿದೆ. ಈ ರೀತಿ ಹಳೆಯ ಸೇತುವೆ ಮುಚ್ಚಲ್ಪಟ್ಟರೆ ಮಂಗಳೂರು, ಸುರತ್ಕಲ್, ಉಡುಪಿ ನಡುವೆ ಸಂಚಾರ ಅಸ್ತವ್ಯಸ್ತಗೊಳ್ಳಲಿದೆ. ವ್ಯಾಪಾರ, ವ್ಯವಹಾರ, ಆರೋಗ್ಯ, ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆ ಕುಸಿದರೆ ಬಹಳ ದೊಡ್ಡ ದುರಂತವನ್ನು ಎದುರುಗೊಳ್ಳಬೇಕಿದೆ.
ಸಂಬಂಧ ಪಟ್ಟವರ ತೀರಾ ಬೇಜವಾಬ್ದಾರಿತನದಿಂದ ನಾಲ್ಕು ವರ್ಷಗಳಿಂದ ತೆವಳುತ್ತಾ ಸಾಗಿರುವ ಕೂಳೂರು ಹೊಸ ಸೇತುವೆಯ ಕಾಮಗಾರಿಯನ್ನು ಈ ವರ್ಷಾಂತ್ಯದ ಗಡುವನ್ನು ನಿರ್ಧರಿಸಿ ಪೂರ್ಣಗೊಳಿಸಬೇಕು, ಅಲ್ಲಿಯವರಗೆ ಹಳೆಯ ಸೇತುವೆ ಮುಚ್ಚಬಾರದು. ಹಾಗೂ ನಂತೂರು – ಸುರತ್ಕಲ್ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಿ ದುರಸ್ತಿಗೊಳಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರವನ್ನು ಹೋರಾಟ ಸಮಿತಿ ಬಲವಾಗಿ ಆಗ್ರಹಿಸುತ್ತದೆ. ಈ ಬೇಡಿಕೆಗಳ ಮೇಲೆ ಸರಣಿ ಪ್ರತಿಭಟನೆಗಳನ್ನು ಸಂಘಟಿಸುವುದಾಗಿ ಸಮಿತಿ ಎಚ್ಚರಿಸಿದೆ.
You must be logged in to post a comment Login