ಸರ್ವರ್ ಡೌನ್ ನಿಂದಾಗಿ ಉಡುಪಿಯಲ್ಲಿ ಪಡಿತರ ಗೊಂದಲ

ಉಡುಪಿ ಎಪ್ರಿಲ್ 08: ಸರಿಯಾದ ಮುಂಜಾಗೃತಾ ಕ್ರಮ ಕೈಗೊಳ್ಳದೆ ಪಡಿತರ ಅಕ್ಕಿ ವಿತರಣೆಗೆ ಮುಂದಾಗಿದ್ದ ಉಡುಪಿ ಜಿಲ್ಲಾಡಳಿತಕ್ಕೆ ಸರ್ವರ್ ಡೌನ್ ಸೇರಿದಂತೆ ಒಟಿಪಿ ಸಮಸ್ಯೆಗಳು ಪಡಿತರ ವಿತರಣೆಯನ್ನು ಗೊಂದಲದ ಗೂಡಾಗಿಸಿದೆ.

ಈಗಾಗಲೇ ಲಾಕ್ ಡೌನ್ ನಲ್ಲಿರುವ ಜನರು ಮತ್ತೆ ಲಾಕ್ ಡೌನ್ ನ್ನು ಮುಂದುವರೆಸುವ ಭಯದಿಂದ ಪಡಿತರ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಆದರೆ ಬಂದ ಜನರಿಗೆ ಮಾತ್ರ ಪಡಿತರ ಸಿಗದೆ ವಾಪಾಸ್ ಹೋಗ ಬೇಕಾದ ಪರಿಸ್ಥಿತಿ ಬಂದೊದಗಿತ್ತು.

ಉಡುಪಿ ಜಿಲ್ಲೆಯ 298 ಪಡಿತರ ಅಂಗಡಿಗಳಿಗೆ ಅಕ್ಕಿ ಮಾತ್ರ ಈವರೆಗೆ ಪೂರೈಕೆಯಾಗಿದೆ. ಗೋಧಿ, ಸಕ್ಕರೆ, ಎಣ್ಣೆ, ಬೇಳೆ ಕಾಳು ಯಾವುದು ಪೂರೈಕೆಯಾಗಿಲ್ಲ. ಬಿಪಿಎಲ್ ಕಾರ್ಡುದಾರರಿಗೆ ತಲಾ 14 ಕೆಜಿ ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಉಡುಪಿಯಲ್ಲಿ ಒಬ್ಬೊಬ್ಬರಿಗೆ 10 ಕೆಜಿ ಅಕ್ಕಿ ಮಾತ್ರ ಪೂರೈಕೆಯಾಗುತ್ತಿದೆ. ಒಟಿಪಿ, ಹೆಬ್ಬೆಟ್ಟಿನ ಗುರುತು ಇಲ್ಲದೆ ಪಡಿತರ ವಿತರಿಸಬೇಕೆಂದು ಸರ್ಕಾರ ಆದೇಶ ಮಾಡಿದೆ. ಕಳೆದೆರಡು ದಿನಗಳಿಂದ ಸರ್ವರ್ ಡೌನ್ ಆದ ಹಿನ್ನೆಲೆ ನಿಗದಿತ ಪ್ರಮಾಣದಲ್ಲಿ ಅಕ್ಕಿ ವಿತರಣೆ ಆಗುತ್ತಿಲ್ಲ. ಹೀಗಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ಗ್ರಾಮೀಣ ಪ್ರದೇಶದಲ್ಲಿ ಜನ ಜಾತ್ರೆಯೇ ಆಗಿದೆ.

ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂದೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂದಿತ್ತು. ಸರ್ವರ್ ಡೌನ್ ಆಗಿರುವುದರಿಂದ ಜನ ಬಿಸಿಲಿನಲ್ಲಿ ಬೇಯಬೇಕಾಯಿತು. ದಿನಕ್ಕೆ 50 ಜನರಿಗೆ ಮಾತ್ರ ಪಡಿತರ ವಿತರಣೆ ಮಾಡುವ ಸುದ್ದಿ ಹರಿದಾಡುತ್ತಿರುವುದರಿಂದ ಜನ ಗೊಂದಲಕ್ಕೀಡಾಗಿ ಒಂದೇ ದಿನ ನ್ಯಾಯಬೆಲೆ ಅಂಗಡಿಯತ್ತ ಮುಖ ಮಾಡಿದ್ದರು.

ಪಡಿತರ ಪಡೆದುಕೊಳ್ಳಲು ಬಂದ ಜನರು ಮಾತನಾಡಿ, ಎಲ್ಲಾ ದಿನಸಿ ಸಿಗುತ್ತಿಲ್ಲ. ಅಕ್ಕಿಗಾಗಿ ಮಧ್ಯಾಹ್ನದವರೆಗೆ ಕಾಯುವ ಸ್ಥಿತಿಯಿದೆ. ಅಧಿಕಾರಿಗಳು ಒಂದೊಂದು ಏರಿಯಾಕ್ಕೆ ಒಂದು ದಿನ ಅಂತ ನಿಗದಿಪಡಿಸಿದರೆ ಬಿಸಿಲಲ್ಲಿ ಕಾಯುವುದು ತಪ್ಪುತ್ತದೆ ಎಂದರು. ಅಲ್ಲದೇ ಸಾಮಾಜಿಕ ಹೋರಾಟಗಾರರು ನ್ಯಾಯಬೆಲೆ ಅಂಗಡಿ ಮಾಲೀಕರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡಾ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆದಿದೆ.