5 ಸಾವಿರ ಲೀಟರ್ ಸ್ಯಾನಿಟೈಜರ್ ತಯಾರಿಸಿದ ಉಡುಪಿ ಅಬಕಾರಿ ಇಲಾಖೆ

ಉಡುಪಿ ಎಪ್ರಿಲ್ 8:ಕೇವಲ ಸರಕಾರಿ ಬೊಕ್ಕಸ ತುಂಬಲು ಮತ್ತು ಜನರಿಗೆ ಮದ್ಯ ಮಾರಾಟ ನೋಡಿಕೊಳ್ಳುವ ಅಬಕಾರಿ ಇಲಾಖೆ ಒಂದೊಳ್ಳೆ ಕೆಲಸ ಮಾಡಿದೆ. ಕೊರೊನಾ ವೈರಸ್‍ನಿಂದ ಭಾರತ ಲಾಕ್‍ಡೌನ್ ಆಗಿರುವ ಈ ಸಂದಿಗ್ಧ ಸ್ಥಿತಿಯಲ್ಲಿ ಉಡುಪಿ ಅಬಕಾರಿ ಇಲಾಖೆ ಈ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೊನಾ ಮಹಾಮಾರಿ ವಿರುದ್ದ ಹೋರಾಡಲು ಹ್ಯಾಂಡ್ ಸಾನಿಟೈಜರ್ ಗಳ ಭಾರಿ ಅಗತ್ಯವಿದ್ದು, ಈಗಾಗಲೇ ದೇಶದಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳಿಗಾಗಿ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕಲಾಗಿತ್ತು. ಅಲ್ಲದೆ ಸಾನಿಟೈಜರ್ ಗಳನ್ನು ಕಂಪನಿಗಳಲ್ಲೂ ಸ್ಟಾಕ್ ಸಂಪೂರ್ಣ ಖಾಲಿಯಾಗಿತ್ತು. ಈ ಹಿನ್ನಲೆ ರಾಜ್ಯದಲ್ಲೂ ಲಾಕ್ ಡೌನ್ ಆರಂಭವಾದ ನಂತರ ಉಡುಪಿ ಅಬಕಾರಿ ಇಲಾಖೆ ಮಹಾಮಾರಿ ರೋಗದ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಸರ್ಕಾರಿ ಸಿಬ್ಬಂದಿಗಾಗಿ 5 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರು ಮಾಡಿದೆ.

ಪೈಲೆಟ್ ಪ್ರಾಜೆಕ್ಟ್ ಆಗಿ ಉಡುಪಿಯಲ್ಲಿ ತಯಾರು ಮಾಡಿದ ಸ್ಯಾನಿಟೈಸರ್ ರಾಜ್ಯಕ್ಕೆ ಮಾದರಿಯಾಗಿದೆ. ಕೊರೊನಾ ವಿರುದ್ಧ ಹೋರಾಡುವ ವೈದ್ಯರು, ನರ್ಸ್, ಆರೋಗ್ಯ ಸಹಾಯಕರು, ಕಂದಾಯ ಇಲಾಖೆ ಹೀಗೆ ಎಲ್ಲಾ ಸರ್ಕಾರಿ ಸಿಬ್ಬಂದಿಗೆ, ಪೊಲೀಸರಿಗೆ ಅಗತ್ಯವಾದ ಸ್ಯಾನಿಟೈಸರ್ ತಯಾರು ಮಾಡಿ ಉಡುಪಿಯ ಅಬಕಾರಿ ಇಲಾಖೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಉಡುಪಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಬಕಾರಿ ಇಲಾಖೆ ಔಷಧ ನಿಯಂತ್ರಣ ಇಲಾಖೆಯಿಂದ ಸ್ಯಾನಿಟೈಸರ್ ತಯಾರಿಸಲು ಐದು ವರ್ಷಕ್ಕೆ ಪರವಾನಗಿ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗೆ ಈಗಾಗಲೇ 4,000 ಲೀಟರ್ ಸ್ಯಾನಿಟೈಸರನ್ನು ತಯಾರು ಮಾಡಿಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಇನ್ನೂ 2,000 ಲೀಟರ್ ಸ್ಯಾನಿಟೈಸರ್ ಗೆ ಬೇಡಿಕೆಯಿದೆ.

375 ml ಸ್ಯಾನಿಟೈಸರ್ ಬಾಟಲಿಗೆ ಮಾರುಕಟ್ಟೆಯಲ್ಲಿ 197.50 ರೂಪಾಯಿ ವೆಚ್ಚ ತಗುಲುತ್ತದೆ. ಆದರೆ ಅಬಕಾರಿ ಇಲಾಖೆ ಸ್ಯಾನಿಟೈಸರ್ ಬಾಟಲಿಗೆ 96 ರೂಪಾಯಿ ಮಾತ್ರ ನಿಗದಿ ಮಾಡಿದೆ. ಇದರ ಖರ್ಚನ್ನು ಉಡುಪಿ ಜಿಲ್ಲಾಡಳಿತವು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಭರಿಸುತ್ತಿದೆ.