LATEST NEWS
ಕರಾವಳಿಯಲ್ಲಿ ಡಾಲ್ಫಿನ್ ಗಳ ಸರಣಿ ಸಾವು ಆತಂಕದಲ್ಲಿ ಮೀನುಗಾರರು
ಕರಾವಳಿಯಲ್ಲಿ ಡಾಲ್ಫಿನ್ ಗಳ ಸರಣಿ ಸಾವು ಆತಂಕದಲ್ಲಿ ಮೀನುಗಾರರು
ಮಂಗಳೂರು ಜೂನ್ 3: ಕರಾವಳಿಯ ಕಡಲ ತೀರದಲ್ಲಿ 15 ದಿನಗಳಿಂದ ಇಚೇಗೆ ಡಾಲ್ಫಿನ್ ಹಾಗೂ ಕಡಲಾಮೆಗಳ ಸರಣಿ ಸಾವು ಆತಂಕ್ಕೀಡು ಮಾಡಿದೆ. ಸಮುದ್ರದಲ್ಲಿ ತಟದಲ್ಲಿ ಕಂಡು ಬಂದಿರುವ ಡಾಂಬರು ತ್ಯಾಜ್ಯವೇ ಸಮುದ್ರ ಜೀವಿಗಳ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದ್ದು, ಕರಾವಳಿಯ ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ.
ಸುರತ್ಕಲ್ ನ ಕಡಲತೀರದಲ್ಲಿ ಡಾಲ್ಫಿನ್, ಕಡಲಾಮೆ ಮೊದಲಾದ ಸಮುದ್ರ ಜೀವಿಗಳು ಸಾವಿಗೀಡಾಗಿ ದಡ ಸೇರುತ್ತಿದ್ದು, ಕಳೆದ 15 ದಿನಗಳಿಂದೀಚೆಗೆ ನಾಲ್ಕು ಡಾಲ್ಫಿನ್ ಮತ್ತು ಮೂರು ಕಡಲಾಮೆಗಳು ಸತ್ತು ದಡದಲ್ಲಿ ಬಿದ್ದಿದೆ.
ಶನಿವಾರ ಸಸಿಹಿತ್ಲು ಅಗ್ಗಿದಕಳಿಯ ಎಂಬಲ್ಲಿ ಸಮುದ್ರಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಮೃತದೇಹ ಪತ್ತೆಯಾಗಿದೆ. ಮುಕ್ಕ ಬಳಿ ಇನ್ನೊಂದು ಡಾಲ್ಫಿನ್ ಮೀನಿನ ಮೃತದೇಹ ಎರಡು ದಿನ ಹಿಂದೆ ದಡ ಸೇರಿದೆ. ಇದೇ ವೇಳೆ ಕಡಲಾಮೆಯ ಮೃತದೇಹ ಸಮುದ್ರ ತೀರದಲ್ಲಿ ಕಂಡು ಬಂದಿದ್ದರೂ ಬಳಿಕ ಸಮುದ್ರ ಸೇರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೂರು ವಾರದ ಹಿಂದೆ ಸುರತ್ಕಲ್ ಬಳಿಯ ಗುಡ್ಡೆಕೊಪ್ಲ, ತಣ್ಣೀರುಬಾವಿ ಬಳಿ ಎರಡು ಡಾಲ್ಫಿನ್ ಹಾಗೂ ಗುಡ್ಡೆಕೊಪ್ಲ, ಹೊಸಬೆಟ್ಟು ಬಳಿ ಎರಡು ಕಡಲಾಮೆ ಮೃತದೇಹಗಳು ಸಿಕ್ಕಿದ್ದವು. ಇದಕ್ಕೆ ಸಮುದ್ರ ಮಾಲಿನ್ಯ ಕಾರಣ ಆಗಿರಬಹುದು ಎಂದು ಮೀನುಗಾರರು ಶಂಕೆ ವ್ಯಕ್ತಪಡಿಸಿದ ಬೆನ್ನಿಗೆ ಶನಿವಾರ ಮತ್ತೆ ಎರಡು ಡಾಲ್ಫಿನ್‌ಗಳ ಮೃತದೇಹ ಲಭಿಸಿದ್ದು ಮೀನುಗಾರರಲ್ಲಿ ಆತಂಕ ಮನೆಮಾಡಿದೆ.