LATEST NEWS
ವಿಷನ್ 2025 ಸಾವಯವ ರೈತರಿಗೆ ಪ್ರತ್ಯೇಕ ಮಾರುಕಟ್ಟೆ
ವಿಷನ್ 2025 ಸಾವಯವ ರೈತರಿಗೆ ಪ್ರತ್ಯೇಕ ಮಾರುಕಟ್ಟೆ
ಉಡುಪಿ, ಅಕ್ಟೋಬರ್ 15 : ವಿಷನ್-೨೦೨೫ರ ಪ್ರಕಾರ ಸಾವಯವ ರೈತರಿಗೆ ಪ್ರತ್ಯೇಕ ವಿಶೇಷವಾದ ಮಾರುಕಟ್ಟೆಯ ನಿರ್ಮಾಣ ಆಗುವ ಆಲೋಚನೆ ಮಾಡಲಾಗಿತ್ತು, ಅದರ ಫಲವಾಗಿ ಈ ಸಂತೆ ಆಯೋಜನೆ ಮಾಡಲಾಗಿದೆ ಎಂದು ಮೀನುಗಾರಿಕೆ, ಯುವಜನ ಸಬಲೀಕರಾಣ, ಕ್ರೀಡಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರಿಂದು ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕಾ ಕ್ಷೇತ್ರದ ರೈಸೇವಾ ಕೇಂದ್ರದ ಆವರಣದಲ್ಲಿ , ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಉಡುಪಿ ಜಿಲ್ಲೆ,ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲಾ ಸಾವಯವ ಕೃಷಿಕರ ಸಂಘಗಳ ಪ್ರಾಂತೀಯ ಒಕ್ಕೂಟ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾವಯವ ಸಂತೆ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ದೀರ್ಘ ಕಾಲ ಆಸ್ಪತ್ರೆಗೆ ಹೋಗದಂತೆ ಆರೋಗ್ಯದ ಕಾಳಜಿ ಮಾಡುವ ಎಲ್ಲಾ ಜನರು ಮೊದಲು ಸಾವಯವ ತರಕಾರಿಗಳನ್ನು ಸೇವಿಸಬೇಕು. ಸಾವಯವ ತರಕಾರಿಗಳನ್ನು ಸೇವಿಸುವುದರಿಂದ ಯಾವುದೇ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದರು.
ರೈತರು ತಾವು ಬೆಳೆದ ಬೆಳೆಗಳನ್ನು ಮಧ್ಯವರ್ತಿಯ ಸಹಾಯವಿಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವಿದು. ಈ ಸಂತೆಯಲ್ಲಿ ಪ್ರಾಮಾಣಿಕತೆಯಿಂದ ಕೂಡಿದ್ದು, ಸಾವಯವ ತರಕಾರಿಯಲ್ಲದೆ ಬೇರೆ ತರಕಾರಿಗಳನ್ನು ಮಾರಲು ಅವಕಾಶವಿಲ್ಲ. ರೈತರು ಧೈರ್ಯದಿಂದ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಬಹುದೆಂದರು.
2 ವರ್ಷದ ಹಿಂದೆ ಪುಷ್ಪ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಈಗ ಹೆಚ್ಚಿನ ಚಟುವಟಿಕೆಗಳು ನಡೆಯಲಿವೆ. ಕಷ್ಟಪಟ್ಟು ರೈತರು ಬೆಳೆದ ಬೆಳೆಗಳಿಗೆ ಸರ್ಕಾರದಿಂದ ಉತ್ತಮ ಬೆಲೆ ದೊರೆಯಲು ಅನುಕೂಲವಾಗಿದೆ. ಯಾವತ್ತು ನಮಗೆ ಫಲವತ್ತಾದ ಆಹಾರ ಸಿಗುವುದಿಲ್ಲವೋ ಅಂದೇ ನಮ್ಮ ಅಂತ್ಯ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಹೇಳಿದರು.
ಸಿರಿಧಾನ್ಯಗಳ ಪ್ರಯೋಜನ ತಿಳಿಯಬೇಕಾದರೆ ಉಪಯೋಗಿಸಲೇಬೇಕು. ರೈತರು ಸಾವಯವ ಕೃಷಿಯತ್ತ ಹೆಚ್ಚು ಗಮನ ಹಾಗೂ ಆಸಕ್ತಿ ವಹಿಸಬೇಕು ಎಂದು ಮುಖ್ಯ ಅತಿಥಿ ಶೀಲಾ ಕೆ ಶೆಟ್ಟಿ ಹೇಳಿದರು.
You must be logged in to post a comment Login