LATEST NEWS
ಕಾಫಿ ಡೇ ನಿರ್ದೇಶಕ ಸಿದ್ದಾರ್ಥ ಪತ್ತೆ ಕಾರ್ಯಕ್ಕೆ ಕೇಂದ್ರ ಸರಕಾರಕ್ಕೆ ಮನವಿ
ಕಾಫಿ ಡೇ ನಿರ್ದೇಶಕ ಸಿದ್ದಾರ್ಥ ಪತ್ತೆ ಕಾರ್ಯಕ್ಕೆ ಕೇಂದ್ರ ಸರಕಾರಕ್ಕೆ ಮನವಿ
ಮಂಗಳೂರು ಜುಲೈ 30: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ, ಕಾಫಿ ಡೇ ಉದ್ಯಮ ಸಂಸ್ಥೆಗಳ ನಿರ್ದೇಶಕ ಸಿದ್ದಾರ್ಥ ನಾಪತ್ತೆ ಹಿನ್ನಲೆಯಲ್ಲಿ ಇದೀಗ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಇಂದು ಮುಂಜಾನೆಯಿಂದಲೇ ಆರಂಭಗೊಂಡಿದೆ. ಈ ನಡುವೆ ಪತ್ತೆ ಕಾರ್ಯಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ.
ಸ್ಥಳೀಯ ಮುಳುಗುತಜ್ಞರ ಒಂದು ತಂಡ ಹಾಗೂ ಅಗ್ನಿಶಾಮಕ ದಳದ ಒಂದು ತಂಡ ಈಗಾಗಲೇ ಎರಡು ಬೋಟ್ ಗಳಲ್ಲಿ ಸರ್ಚ್ ಅಪರೇಶನ್ ಆರಂಭಿಸಿದ್ದಾರೆ. ಎನ್.ಡಿ.ಆರ್.ಎಫ್ ನ ಎರಡು ತುಕಡಿ ಈಗಾಗಲೇ ಸ್ಥಳಕ್ಕೆ ಆಗಮಿಸಿದ್ದು, ನದಿಯ ಇನ್ನೊಂದು ಕಡೆಯಿಂದ ಹುಡುಕಾಟ ಆರಂಭಿಸಿದೆ.
ಕಾಫಿ ಕಿಂಗ್ ಸಿದ್ದಾರ್ಥ ಅವರ ಪತ್ತೆ ಕಾರ್ಯಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಂಸದೆ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಉಳ್ಳಾಲ ಸೇತುವೆಯಲ್ಲಿ ಸಿದ್ಧಾರ್ಥ್ ನಿನ್ನೆ ನಾಪತ್ತೆಯಾಗಿದ್ದು, ನೇತ್ರಾವತಿ ನದಿಯು ಸಮುದ್ರ ಸೇರುವ ಪ್ರದೇಶದಲ್ಲೇ ಈ ಘಟನೆ ನಡೆದಿದೆ. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೇ ಆದಲ್ಲಿ ಮೃತ ಶರೀರ ಕಡಲು ಸೇರುವ ಸಾಧ್ಯತೆಯೂ ಇದೆ. ಅಲ್ಲದೆ ಎರಡು ಅಥವಾ ಮೂರು ದಿನದ ಬಳಿಕವೇ ಶವ ಮತ್ತೆ ದಡಕ್ಕೆ ಬರುವ ಸಾಧ್ಯತೆಯೂ ಹೆಚ್ಚಾಗಿದೆ. ಅಳಿವೆ ಬಾಗಿಲು ಆಗಿರುವ ಸಮುದ್ರ ಹಾಗೂ ನದಿಯ ನೀರಿನ ಒತ್ತಡವೂ ಹೆಚ್ಚಿರುವ ಕಾರಣ, ಪತ್ತೆ ಕಾರ್ಯಾಚರಣೆ ತೊಂದರೆಯಾಗುತ್ತಿದೆ.
ಮಂಗಳೂರು ಪೊಲೀಸ್ ಅಧಿಕಾರಿಗಳು ಸೇತುವೆ ಬಳಿಯಲ್ಲೇ ಇದ್ದು ಪತ್ತೆ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ಶಾಸಕರಾದ ಯು.ಟಿ ಖಾದರ್, ಟಿ.ಡಿ.ರಾಜೇಗೌಡ ಅವರೂ ಸ್ಥಳಕ್ಕೆ ಆಗಮಿಸಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ದೋಣಿ, ಈಜುಗಾರರ ನೆರವಿನೊಂದಿಗೆ ಶೋಧ ಕಾರ್ಯ ನಡೆಯುತ್ತಿದೆ. ಇತ್ತ ಬೆಂಗಳೂರಿನ ಎಸ್.ಎಂ ಕೃಷ್ಣ ನಿವಾಸಕ್ಕೆ ಕುಟುಂಬಸ್ಥರು, ಗಣ್ಯರು ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ.