Connect with us

    DAKSHINA KANNADA

    SDPI ದ.ಕ.ಜಿಲ್ಲಾ ಪ್ರತಿನಿಧಿಗಳ ಸಭೆ : ಆಂಟಿ ಕಮ್ಯುನಲ್ ಕಾಯ್ದೆ ಜಾರಿ, ಡ್ರಗ್ ಮಾಫಿಯಾ ಮಟ್ಟ, ಸೌಜನ್ಯ ಕುಟುಂಬಕ್ಕೆ ನ್ಯಾಯ ಸೇರಿ ಆರು ನಿರ್ಣಯ ಅಂಗೀಕಾರ..!

    SDPI ದ.ಕ.ಜಿಲ್ಲಾ ಪ್ರತಿನಿಧಿಗಳ ಸಭೆ ಮುಕ್ತಾಯವಾಗಿದ್ದು ಆಂಟಿ ಕಮ್ಯುನಲ್ ಕಾಯ್ದೆ ಜಾರಿ, ಡ್ರಗ್ ಮಾಫಿಯಾ ಮಟ್ಟ, ಸೌಜನ್ಯ ಕುಟುಂಬಕ್ಕೆ ನ್ಯಾಯ ಸೇರಿ ಪ್ರಮುಖ ಆರು ನಿರ್ಣಯಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.

    ಮಂಗಳೂರು : SDPI ದ.ಕ.ಜಿಲ್ಲಾ ಪ್ರತಿನಿಧಿಗಳ ಸಭೆ ಮುಕ್ತಾಯವಾಗಿದ್ದು ಆಂಟಿ ಕಮ್ಯುನಲ್ ಕಾಯ್ದೆ ಜಾರಿ, ಡ್ರಗ್ ಮಾಫಿಯಾ ಮಟ್ಟ, ಸೌಜನ್ಯ ಕುಟುಂಬಕ್ಕೆ ನ್ಯಾಯ ಸೇರಿ ಪ್ರಮುಖ ಆರು ನಿರ್ಣಯಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.

    ಮಂಗಳೂರು ಹೊರವಲಯದ ಅರ್ಕುಳದ ಯಶಸ್ವಿ ಹಾಲಿನಲ್ಲಿ ನಡೆದಂತಹ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಈ ಕೆಳಕಂಡ ಆರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

    1) ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರದ ದಿನಗಳಲ್ಲೂ ಕರಾವಳಿ ಭಾಗದಲ್ಲಿ ನಿರಂತರವಾಗಿ ವಿದ್ಯಾರ್ಥಿಗಳು, ಆಟೋ ಚಾಲಕರು, ಗೊಸಾಗಾಟಗಾರರು ಹಾಗೂ ಪ್ರಯಾಣಿಕರ ಮೇಲೆ ನಿರಂತರವಾದಂತಹ ಅನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಕರ್ನಾಟಕ ರಾಜ್ಯದ ಮಾನ್ಯ ಗೃಹ ಸಚಿವರಾದಂತಹ ಡಾ. ಜಿ ಪರಮೇಶ್ವರ್ ರವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನೈತಿಕ ಪೊಲೀಸ್ ಗಿರಿಯನ್ನು ತಡೆಯಲು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಂಟಿ ಕಮ್ಯುನಲ್ ವಿಂಗ್ ಎಂಬ ತನಿಖಾ ಸಂಸ್ಥೆಯನ್ನು ಸ್ಥಾಪಿಸುತ್ತೇವೆ ಎಂದು ಘೋಷಣೆ ಮಾಡಿದರು ಅದರ ಭಾಗವಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ಆಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಿದರು. ಆನಂತರವು ಕೂಡ ಅನೈತಿಕ ಪೊಲೀಸ್ ಗಿರಿ ಎಗ್ಗಿಲ್ಲದೆ ಮುಂದುವರೆದಿದೆ, ಕೆಲವೊಂದು ಪ್ರಕರಣಗಳಲ್ಲಿ ಪೊಲೀಸರು ಅಪರಾಧಿಗಳನ್ನು ಬಂಧಿಸಿದರೆ ಸ್ಥಳೀಯ ಬಿಜೆಪಿಯ ಜನಪ್ರತಿನಿಧಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಅಪರಾಧಿಗಳನ್ನು ತಮ್ಮ ಅಧಿಕಾರ ಬಲವನ್ನು ದುರ್ಬಳಕೆಯಿಂದ ಬಿಡುಗಡೆಗೊಳಿಸುತ್ತಿದ್ದಾರೆ ಅಥವಾ ಸ್ವತಃ ಪೊಲೀಸರೇ ಕೆಲವೊಂದು ದುರ್ಬಲ ಸೆಕ್ಷನ್ ಗಳನ್ನು ಅವರ ಮೇಲೆ ಹಾಕಿದ ಪರಿಣಾಮ ಆರೋಪಿಗಳು ಒಂದೆರಡು ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಹೊರಬರುತ್ತಾರೆ. ಇದರಿಂದಾಗಿ ಆಂಟಿ ಕಮ್ಯುನಲ್ ವಿಂಗ್ ಎಂಬಂತಹ ಈ ತಂಡದ ಕಾರ್ಯ ವೈಖರಿ ನಿಷ್ಪ್ರಯೋಜಕವಾಗಿದೆ. ಆದ್ದರಿಂದ ಪ್ರಸ್ತುತ ಸರಕಾರವು ಇದರ ಬದಲಿಗೆ ಆಂಟಿ ಕಮ್ಯುನಲ್ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು.

    2) ರಾಜ್ಯ ರಾಜಧಾನಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ 2018 ರಲ್ಲಿ ಪ್ರಾರಂಭ ಗೊಂಡಿದ್ದರೂ ಕೂಡ ಕಾಮಗಾರಿಯ ಪ್ರಗತಿ ಕುಂಠಿತ ವಾಗಿದೆ, ಕಾಮಗಾರಿಯ ಸಂದರ್ಭದಲ್ಲಿ ಸುಗಮ ಸಂಚಾರಕ್ಕೆ ಕೇರಳ ಮಾದರಿಯಲ್ಲಿ ಉತ್ತಮ ಗುಣಮಟ್ಟದ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಬೇಕು ಮತ್ತು ಈಗಾಗಲೇ ಚತುಷ್ಪಥ ಕಾಮಗಾರಿ ಪೂರ್ಣಗೊಂಡ ಪಂಪ್ ವೆಲ್ ನಿಂದ ಬಿಸಿ ರೋಡ್ ವರೆಗೆ ಹೆದ್ದಾರಿಯ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆಗಳು, ಪ್ರಧಾನ ಸ್ಥಳಗಳಲ್ಲಿ ಅಂಡರ್ ಪಾಸೇಜ್ ಅಥವಾ ಓವರ್ ಬ್ರಿಡ್ಜ್ ನಿರ್ಮಾಣ ಮಾಡಬೇಕು, ವೈಜ್ಞಾನಿಕ ರೀತಿಯಲ್ಲಿ ಯು ಟರ್ನ್ ನಿರ್ಮಿಸಬೇಕು ಹಾಗೂ ಹೆದ್ದಾರಿಯ ಉದ್ದಕ್ಕೂ ದಾರಿ ದೀಪಗಳನ್ನು ಅಳವಡಿಸಬೇಕು.

    3) ಶತಮಾನಗಳ ಇತಿಹಾಸ ಹೊಂದಿರುವ ಮಂಗಳೂರಿನ ಮೀನುಗಾರಿಕಾ ಬಂದರು ಸಾವಿರಾರು ಜನರಿಗೆ ಉದ್ಯೋಗ ನೀಡುವ ಕರಾವಳಿಯ ಪ್ರಮುಖ ಉದ್ಯಮ ಕೇಂದ್ರವಾಗಿದೆ. ಸರಕಾರವು ಇಲ್ಲಿನ ಉದ್ಯಮಿಗಳನ್ನು ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸುವ ಉದ್ಧೇಶದಿಂದ ಮಂಗಳೂರಿನ ಮೀನುಗಾರಿಕಾ ಬಂದರನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಮತ್ತು ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಮಂಗಳೂರು ಬಂದರು ಸೇರಿದಂತೆ ಕರಾವಳಿಯ ಕಡಲ ಕಿನಾರೆಗಳನ್ನು ಅಭಿವೃದ್ಧಿಪಡಿಸಬೇಕು.

    4) ಮಂಗಳೂರನ್ನು ಮೆಡಿಕಲ್ ಹಬ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ ಆದರೆ ಅಸಲಿಗೆ ಮಂಗಳೂರು ಈಗ ಮೆಡಿಕಲ್ ಮಾಫಿಯಾದ ಹಬ್ ಎಂದರೆ ತಪ್ಪಾಗದು. ಕಾರಣ ಮಂಗಳೂರಿನಲ್ಲಿ ಬಹುತೇಕ ಎಲ್ಲಾ ವಿದ್ಯಾಸಂಸ್ಥೆಗಳು, ಮೆಡಿಕಲ್ ಕಾಲೇಜುಗಳು, ಖಾಸಗಿ ಒಡೆತನದ ಸಂಸ್ಥೆಗಳಾಗಿವೆ. ಇವೆಲ್ಲವೂ ಅತ್ಯಂತ ದುಬಾರಿ ವೆಚ್ಚದ ಶಿಕ್ಷಣ ಸಂಸ್ಥೆಗಳಾಗಿವೆ ,ಇಲ್ಲಿ ಶಿಕ್ಷಣ ಪಡೆಯುವುದು ಬಡ ಮತ್ತು ಮಧ್ಯಮ ವರ್ಗದ ವಿಧ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ, ಈಗಾಗಲೇ ಸರಕಾರ ಜಿಲ್ಲೆಗೆ ಒಂದರಂತೆ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಹೊರಟಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಸರಕಾರ ನಿರ್ಲಕ್ಷಿಸಿದೆ ಇದನ್ನು ಸಭೆಯು ಖಂಡಿಸಿದೆ .ಈ ಕೂಡಲೇ ಸರಕಾರವು ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಸರಕಾರಿ ಮೆಡಿಕಲ್ ಕಾಲೇಜ್ ಹಾಗೂ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸುವ ಆದೇಶ ಹೊರಡಿಸಬೇಕು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮೆಡಿಕಲ್ ಮಾಫಿಯಾದ ನಿಯಂತ್ರಣದಲ್ಲಿದೆ ಇದನ್ನು ನಿಯಂತ್ರಿಸಲು ಜಿಲ್ಲೆಗೆ ಸಾವಿರ ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಸರಕಾರಿ ಆಸ್ಪತ್ರೆ ನಿರ್ಮಿಸಬೇಕು, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಕನಿಷ್ಠ ನೂರು ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಬೇಕು.

    5) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗೋಚರವಾದ ರೀತಿಯಲ್ಲಿ ಕಾರ್ಯಾಚರಿಸುತ್ತಿರುವ ಮಾದಕ ವಸ್ತುಗಳ ಜಾಲದ ವಿರುದ್ಧ ಸರಕಾರ ನಿರ್ಧಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು . ಈ ಜಾಲವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ವಿಶೇಷ ತಂಡಗಳನ್ನು ರಚಿಸಿ ವಿದ್ಯಾರ್ಥಿಗಳು ಸೇರಿದಂತೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಈ ಮಾದಕ ವಸ್ತುಗಳ ಜಾಲದ ಹಿಂದಿರುವಂತಹ ದುಷ್ಟ ಶಕ್ತಿಗಳನ್ನು ಬಂಧಿಸಿ ಅವರ ಮೇಲೆ ನಿರ್ಧಾಕ್ಷಿಣ್ಯ ವಾದಂತಹ ಕ್ರಮಗಳನ್ನು ಕೈಗೊಳ್ಳಬೇಕು.

    6) ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ತೀವ್ರ ರೀತಿಯ ಪ್ರತಿಭಟನೆಗಳು ನಡೆಯುತ್ತಿವೆ. ಸರಕಾರವು ಈ ಪ್ರಕರಣವನ್ನು ಗಂಭೀರ ಮತ್ತು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸೌಜನ್ಯ ಪ್ರಕರಣವನ್ನು ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು.

    SDPI ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಗಳ ಸಭೆಯಲ್ಲಿ ಕೈಗೊಂಡ ಈ ನಿರ್ಣಯಗಳನ್ನು ಯಥಾವತ್ತಾಗಿ ಸರಕಾರವು ಜಾರಿಗೆ ತರಬೇಕೆಂದು ಸಭೆಯು ಸರ್ವಾನುಮತದಿಂದ ಸರಕಾರವನ್ನು ಒತ್ತಾಯಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply