LATEST NEWS
ದಕ್ಷಿಣಕನ್ನಡ ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ಹಿಂಪಡೆಯಲು ಎಸ್ ಡಿಪಿಐ ಆಗ್ರಹ
ಮಂಗಳೂರು ಜುಲೈ 28: ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ದಾಳಿ ನಡೆಸುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದ.ಕ ಜಿಲ್ಲಾಧಿಕಾರಿಯವರು ಆದೇಶ ನೀಡಿದ ಬೆನ್ನಲ್ಲೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರಕಾರದ ಆದೇಶವನ್ನು ಎಸ್ ಡಿಪಿಐ ಖಂಡಿಸಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಎಸ್ ಡಿಪಿಐ ಸಂಘಪರಿವಾರದ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ಜಿಲ್ಲಾಧಿಕಾರಿಯವರನ್ನೇ ಕೊಲೆ ಮಾಡುವಂತಹ ಘೋರ ಸಂದೇಶ ರವಾನಿಸಿರುವುದು ಮತ್ತು ಜಿಲ್ಲಾಧಿಕಾರಿಯವರು ಹೇಳಿಕೆ ನೀಡಿದ ಬೆನ್ನಲ್ಲೇ ಅವರನ್ನು ದಿಢೀರ್ ಆಗಿ ಸರ್ಕಾರ ವರ್ಗಾವಣೆ ಮಾಡಿರುವುದು ಆಘಾತಕಾರಿ ನಡೆ ಮತ್ತು ಸರ್ವಾಧಿಕಾರದ ಪರಮಾವಧಿಯಾಗಿದೆ ಎಂದು ತಿಳಿಸಿದೆ.
ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಅಧಿಕಾರಿಗಳಿಗಳನ್ನು ಬಿಜೆಪಿ ಸರ್ಕಾರ ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ ವಾಗಿದೆ. ದ.ಕ ಜಿಲ್ಲೆಯ ಈ ಹಿಂದಿನ ಜಿಲ್ಲಾಧಿಕಾರಿ ಯಾಗಿದ್ದ ಸಶಿಕಾಂತ್ ಸೆಂಥಿಲ್ ಸರ್ ಸೇರಿದಂತೆ ಹಲವಾರು ಐಪಿಎಸ್&ಐಎಎಸ್ ಅಧಿಕಾರಿಗಳು ಬಿಜೆಪಿ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಸಿಡಿದೆದ್ದು ರಾಜಿನಾಮೆ ಸಲ್ಲಿಸಿರುವುದೆಲ್ಲವೂ ಬಿಜೆಪಿ ಸರ್ಕಾರ ಹೇಗೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಕೆಲವೊಂದು ಉದಾಹರಣೆಗಳಾಗಿದೆ.
ಆದ್ದರಿಂದ ಪೋಲಿಸ್ ಇಲಾಖೆ ಕೂಡಲೇ ಜಿಲ್ಲಾಧಿಕಾರಿಗೆ ಹಾಕಿರುವ ಕೊಲೆ ಬೆದರಿಕೆ ಸಂದೇಶವನ್ನು ಲಘುವಾಗಿ ಪರಿಗಣಿಸದೇ ಸಂದೇಶ ರವಾನಿಸಿದ ಸಂಘಪರಿವಾರದ ಗೂಂಡಾಗಳ ಮೇಲೆ ಸ್ವಯಂ ಪ್ರೇರಿತವಾಗಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಉತ್ತರ ಪ್ರದೇಶದ ಬುಲಂದರ್ ಶಾ ಪೋಲಿಸ್ ಇನ್ಸ್ಪೆಕ್ಟರ್ ಸುಬೋದ್ ಕುಮಾರ್ ರವರಿಗೆ ಬೆದರಿಕೆ ಕರೆ ಮತ್ತು ಸಂದೇಶವನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದ್ದು ಅವರ ಹತ್ಯೆಗೆ ಕಾರಣವಾಗಿತ್ತು.ಹಾಗಾಗಿ ಈ ಬೆದರಿಕೆ ಸಂದೇಶವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು.
ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ನಡೆಸುವಂತಹ ಸಂಘಪರಿವಾರದ ಗೂಂಡಾಗಳ ಮೇಲೆ ತಕ್ಷಣವೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಠಿಣ ಸೆಕ್ಷನ್ ಗಳನ್ನು ಹಾಕಿ ಕಾನೂನು ಕ್ರಮ ಜರುಗಿಸಬೇಕು.
ಅದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.