LATEST NEWS
ಜುಲೈ 1 ರಿಂದಲೇ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ
ಜುಲೈ 1 ರಿಂದಲೇ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ
ಮಂಗಳೂರು, ಜೂನ್ 2 : ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಜುಲೈ ಒಂದರಿಂದಲೇ ಆರಂಭಿಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ನೀಡಲಾಗಿದೆ.
ಜುಲೈ ಒಂದರಿಂದ ನಾಲ್ಕನೇ ತರಗತಿಯಿಂದ ಏಳನೇ ತರಗತಿ ವರೆಗೆ ಶಾಲೆ ಆರಂಭಿಸಲು ದಿನಾಂಕ ನಿಗದಿ ಮಾಡಲಾಗಿದೆ. ಒಂದರಿಂದ 3ನೇ ತರಗತಿ ವರೆಗಿನ ಮಕ್ಕಳಿಗೆ ಹಾಗೂ ಪ್ರೌಢ ಶಾಲೆ ಮಕ್ಕಳಿಗೆ ಜುಲೈ 15ರಿಂದ ಶಾಲೆ ಆರಂಭಿಸಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪೂರ್ವ ಪ್ರಾಥಮಿಕ ವಿಭಾಗದ ಎಲ್ ಕೆಜಿ, ಯುಕೆಜಿ, ನರ್ಸರಿ ಮಕ್ಕಳಿಗೆ ಜುಲೈ 20ರಿಂದ ಶಾಲೆ ಆರಂಭಿಸಲು ಸೂಚನೆ ನೀಡಲಾಗಿದೆ.
ಆದರೆ, ಶಾಲೆ ಆರಂಭಿಸುವುದಕ್ಕೂ ಮುನ್ನ ಪೋಷಕರ ಮತ್ತು ಎಸ್ ಡಿಎಂಸಿ ಸಭೆಯನ್ನು ಕರೆದು ಅಭಿಪ್ರಾಯ ಸಂಗ್ರಹ ಮಾಡಬೇಕು. ಪಾಳಿಯ ಆಧಾರದಲ್ಲಿ ಶಾಲೆ ನಡೆಸಬಹುದೇ ಅಥವಾ ನಡೆಸಬಹುದಿದ್ದರೆ ಯಾವ ರೀತಿ ನಡೆಸಬೇಕು ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಶಾಲಾಡಳಿತ ಮಂಡಳಿಗಳಿಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದೇ ಜೂನ್ 5ರಿಂದ ಶಾಲೆಯ ಸಿಬಂದಿ ಹಾಜರಾಗಿ ಮುಂದಿನ ತಿಂಗಳಿಂದ ಶಾಲೆ ಆರಂಭಿಸಲು ಅಗತ್ಯ ಸಿದ್ಧತೆಯನ್ನು ಮಾಡುವಂತೆ ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಅಭಿಪ್ರಾಯ ಸಂಗ್ರಹಕ್ಕೆ ಬೆಲೆ ಸಿಗಬಹುದೇ…?
ಶಿಕ್ಷಣ ಸಚಿವ ಸುರೇಶ್ ಕುಮಾರ್ ಏನೋ ಶಾಲಾರಂಭದ ಬಗ್ಗೆ ದಿನಾಂಕ ಘೋಷಿಸಿ, ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದ್ದಾರೆ. ಆದರೆ, ಈಗಾಗಲೇ ಶಾಲೆ ಆರಂಭಿಸಲು ತುದಿಗಾಲಲ್ಲಿ ನಿಂತಿರುವ ಖಾಸಗಿ ಶಾಲೆಗಳ ಆಡಳಿತಕ್ಕೆ ಕೈಗೆ ಜುಟ್ಟು ಸಿಕ್ಕಂತಾಗಿದೆ. ಪೋಷಕರ ಅಭಿಪ್ರಾಯ ಏನಿದ್ದರೂ, ತಮ್ಮದೇ ಅಭಿಪ್ರಾಯ ಊದಿಸಿಕೊಂಡು ಮುಂದಿನ ತಿಂಗಳ ಆರಂಭದಿಂದಲೇ ಶಾಲೆ ಆರಂಭಿಸಲು ತಯಾರಿ ನಡೆಸುವುದು ಶತಸ್ಸಿದ್ಧ. ಮಕ್ಕಳ ಪೋಷಕರು ಮಾತ್ರ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಹರಡುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದಾರೆ.