LATEST NEWS
ಉಡುಪಿಯಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್‍ಗೆ ಪ್ರಮೋದ್ ಮಧ್ವರಾಜ್ ಚಾಲನೆ
ಉಡುಪಿಯಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್‍ಗೆ ಪ್ರಮೋದ್ ಮಧ್ವರಾಜ್ ಚಾಲನೆ
ಉಡುಪಿ, ಮಾರ್ಚ್ 24 : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ, ಉಡುಪಿ ಜಿಲ್ಲೆಯ ಚೈತನ್ಯ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಪದಾಧಿಕಾರಿಗಳು ಪ್ರಾರಂಭಿಸಿರುವ ಸವಿರುಚಿ ಕ್ಯಾಂಟೀನ್‍ಗೆ ಮೀನುಗಾರಿಕೆ, ಯುವಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು.
ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳುವ ಉದ್ದೇಶದಿಂದ ಆರಂಭಿಸಿರುವ ಈ ಯೋಜನೆ ಇದಾಗಿದ್ದು, ಉತ್ತಮ ಗುಣಮಟ್ಟದ ಆಹಾರ ನೀಡುವ ಮೂಲಕ , ಈ ಸಂಚಾರಿ ಕ್ಯಾಂಟೀನ್ ಲಾಭದಾಯಕವಾಗಿ ನಡೆದು, ಸ್ವ ಉದ್ಯೋಗದ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿಗಳು 2017-18 ರ ಬಜೆಟ್‍ನಲ್ಲಿ ಘೋಷಿಸಿರುವ ಸವಿರುಚಿ ಕ್ಯಾಂಟೀನ್ ಗಳನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ಪ್ರಾರಂಬಿಸಬೇಕಿದ್ದು, ಈ ಮೊಬೈಲ್ ಕ್ಯಾಂಟೀನ್‍ಗಳಲ್ಲಿ, ಆಹಾರ ಪದಾರ್ಥ ತಯಾರಿಸಿ, ಸಾರ್ವಜನಿಕರಿಗೆ ಅನುಕೂಲವಾದ ಸ್ಥಳಗಳಲ್ಲಿ ಮಾರಾಟ ಮಾಡಬೇಕಿದ್ದು, ಈ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು , ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ 10 ಲಕ್ಷ ರೂ ಬಡ್ಡಿ ರಹಿತ ಸಾಲ ನೀಡಲಾಗುವುದು, ಸಾಲ ಮಂಜೂರಾದ 6 ತಿಂಗಳ ನಂತರದ 67 ಕಂತುಗಳಲ್ಲಿ , 66 ಕಂತುಗಳವರೆಗೆ 15000 ರೂ ಗಳಂತೆ ಹಾಗೂ 67 ನೇ ಕಂತಿನಲ್ಲಿ 10000 ರೂ ಮರು ಪಾವತಿ ಮಾಡಬೇಕಿರುತ್ತದೆ.
ಪ್ರಮುಖ ಜನನಿಬಿಡ ಸ್ಥಳಗಳಲ್ಲಿ ಈ ಮೊಬೈಲ್ ಕ್ಯಾಂಟೀನ್ ಮೂಲಕ ಸಾರ್ವಜನಿಕರಿಗೆ ಆಹಾರ ವಿತರಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ವಾಹನ ನಿಲುಗಡೆಗೆ ಪೊಲೀಸ್ ಇಲಾಖೆಯಿಂದ ಅನುಮತಿಯನ್ನೂ ಸಹ ಪಡೆದಿದ್ದು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಬಗೆಯ ಊಟ ತಯಾರಿಸಲಾಗುವುದು, ಸಸ್ಯಹಾರಿ ಊಟಕ್ಕೆ 25 ರೂ ನಿಗದಿಪಡಿಸಿದೆ ಎಂದು ಚೈತನ್ಯ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮಿ ಮೂಡಬೆಳ್ಳೆ ತಿಳಿಸಿದರು.
You must be logged in to post a comment Login