LATEST NEWS
ಸೌದಿ ಮಹಿಳೆಗೆ ಟ್ವಿಟರ್ ಬಳಸಿದ್ದಕ್ಕಾಗಿ 34 ವರ್ಷ ಜೈಲು ಶಿಕ್ಷೆ

ನವದೆಹಲಿ, ಆಗಸ್ಟ್ 18:ಸೌದಿ ಅರೇಬಿಯಾದ ಮಹಿಳೆಯೊಬ್ಬರು ಟ್ವಿಟರ್ ಬಳಸಿದ್ದಕ್ಕಾಗಿ 34 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿನಿಯಾಗಿದ್ದ ಸಲ್ಮಾ ಅಲ್ ಶೆಹಾಬ್, ಕಳೆದ ವರ್ಷ ರಜೆಯಲ್ಲಿ ಸೌದಿ ಅರೇಬಿಯಾಕ್ಕೆ ಮರಳಿದ್ದಾಗ ಬಂಧನಕ್ಕೊಳಗಾಗಿದ್ದರು.
ಕಾರ್ಯಕರ್ತರು ಹಾಗೂ ಭಿನ್ನಮತೀಯರ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಿದ್ದಕ್ಕಾಗಿ ಆಕೆಯ ಮೇಲೆ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಬ್ರಿಟನ್‌ನ ‘ದಿ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

ಇದನ್ನು ಮಾನವ ಹಕ್ಕು ಹೋರಾಟಗಾರರು ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷ ಭಯೋತ್ಪಾದನಾ ನ್ಯಾಯಾಲಯವು ಪ್ರಾರಂಭದಲ್ಲಿ ಶೆಹಾಬ್ ಮೇಲೆ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ರಾಷ್ಟ್ರದ ಭದ್ರತೆಯನ್ನು ಅಸ್ಥಿರಗೊಳಿಸಲು ಹಾಗೂ ನಾಗರಿಕ ಅಶಾಂತಿಯನ್ನು ಉಂಟು ಮಾಡಲು ಶೆಹಾಬ್ ಇಂಟರ್‌ನೆಟ್ ಅನ್ನು ಬಳಕೆ ಮಾಡಿದ್ದಾರೆ ಎಂದು ಹೇಳಿರುವ ನ್ಯಾಯಾಲಯ, 34 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.