LATEST NEWS
ಸಂತೆಕಟ್ಟೆ -ಕುಸಿದು ಬಿದ್ದ ಸರ್ವಿಸ್ ರಸ್ತೆ…!!

ಉಡುಪಿ ಜುಲೈ 10: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಇದೀಗ ಸ್ವಲ್ಪ ವಿರಾಮ ಪಡೆದಿದೆ. ಆದರೆ ಮಳೆ ಹಾನಿಗಳು ಮಾತ್ರ ಮುಂದುವರೆದಿದ್ದು, ಇದೀಗ ಉಡುಪಿಯ ಸಂತೆಕಟ್ಟೆ ಓವರ್ ಪಾಸ್ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆ ಕುಸಿತವಾಗಿದ್ದು, ವಾಹನ ಸವಾರರಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜನವರಿ 16 ರಿಂದ ಪ್ರಾರಂಭಗೊಂಡಿರುವ ಅಂಡರ್ ಪಾಸ್ ಕಾಮಗಾರಿಯು ನಿಧಾನ ಗತಿಯಲ್ಲಿ ನಡೆಯುತ್ತಿದ್ದು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಟನೆ ಸಂಭವಿಸಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ಹಾನಿಯಾಗಿದ್ದಲ್ಲದೆ ಮಣ್ಣು ಅಂಡರ್ ಪಾಸ್ ನ ತಡೆಗೋಡೆ ಮೇಲೆ ಕೂಡ ಬಿದ್ದಿರುವುದರಿಂದ ಕಾಮಗಾರಿಗೆ ಅಡ್ಡಿ ಉಂಟಾಗಿದೆ ಎಂದು ತಿಳಿದು ಬಂದಿದೆ.

ಸಮೀಪದಲ್ಲೇ ಬಹುಮಹಡಿ ಕಟ್ಟಡಗಳು ಇದ್ದು, ಅವುಗಳೂ ಕೂಡ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ. ಮಳೆ ಹಾಗೂ ರಸ್ತೆ ಕಾಮಗಾರಿಯ ವೇಳೆ ಬಂಡೆ ಕಲ್ಲು ಸಿಕ್ಕ ಪರಿಣಾಮ ತಾತ್ಕಾಲಿಕವಾಗಿ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು.
ಇದರಿಂದ ಉಡುಪಿ ಕುಂದಾಪುರ ಸಂಪರ್ಕ ರಸ್ತೆ ಕಡಿತಗೊಳ್ಳುವ ಸಾಧ್ಯತೆ ಇದೆ. ಮಂಗಳೂರಿಗೆ ತೆರಳುವ ಬಾರಿ ಗಾತ್ರದ ವಾಹನಗಳು ಇದೇ ಹೆದ್ದಾರಿಯಲ್ಲಿ ಓಡಾಟ ಮಾಡುತ್ತಿದ್ದು ಅವುಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಲಿದೆ. ಮಣ್ಣು ಮತ್ತಷ್ಟು ಕುಸಿದರೆ ಈ ಪರಿಸರದ ನೂರಾರು ಮನೆಗಳಿಗೆ ಸಂಪರ್ಕ ಕಡಿತವಾಗುತ್ತದೆ. ಮಾತ್ರವಲ್ಲ ವಾಹನಗಳ ಸಂಚಾರಕ್ಕೆ ತಡೆ ಉಂಟಾಗುವ ಸಾಧ್ಯತೆ ಎನ್ನುವ ಆತಂಕವನ್ನು ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸಿದ್ದಾರೆ.
https://youtube.com/shorts/m16-w-Xk7gs?feature=share