ಶಕ್ತಿಕಾಂತ ದಾಸ್ (Shaktikanta Das) ಅವರ ಅಧಿಕಾರಾವಧಿ ಡಿ.10ರಂದು (ಮಂಗಳವಾರ) ಕೊನೆಗೊಂಡಿತು. ಈ ಹಿನ್ನೆಲೆ ಬುಧವಾರ ಮಲ್ಹೋತ್ರಾ ಅಧಿಕಾರ ಸ್ವೀಕರಿಸಿದ್ದಾರೆ. 2018ರ ಡಿ.12ರಂದು ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಅವರ ಹಠಾತ್ ನಿರ್ಗಮನದ ನಂತರ, RBIನ 25ನೇ ಗವರ್ನರ್ ಆಗಿ ಶಕ್ತಿಕಾಂತ ದಾಸ್ ನೇಮಕಗೊಂಡಿದ್ದರು. ಮೂರು ವರ್ಷ ಅಧಿಕಾರ ಪೂರ್ಣಗೊಳಿಸಿದ ಬಳಿಕ 2ನೇ ಅವಧಿಗೂ ಅವರನ್ನೇ ಮುಂದುವರಿಸಲಾಗಿತ್ತು.
ಯಾರು ಈ ಸಂಜಯ್ ಮಲ್ಹೋತ್ರಾ?
ಸಂಜಯ್ ಮಲ್ಹೋತ್ರಾ ಅವರು 1990ರ ಬ್ಯಾಚ್‌ನ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್‌ಇಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಅಲ್ಲದೇ ತೆರಿಗೆ ಸಂಗ್ರಹ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಾಣುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಜೆಟ್ ವಿಚಾರದಲ್ಲಿ ತೆರಿಗೆ ಸಂಬಂಧಿತ ಪ್ರಸ್ತಾವನೆಗಳನ್ನು ಅವರು ಪರಿಶೀಲಿಸುತ್ತಿದ್ದರು. ಜಿಎಸ್‌ಟಿ ಕೌನ್ಸಿಲ್‌ನ ಪದನಿಮಿತ್ತ ಕಾರ್ಯದರ್ಶಿಯಾಗಿ ಹಾಗೂ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ನಿರೀಕ್ಷೆಗಳ ವಿಚಾರಗಳಂಥ ಕ್ಲಿಷ್ಟ ಸಂದರ್ಭಗಳನ್ನು ಜಾಣ್ಮೆಯಿಂದ ನಿಭಾಯಿಸಿದ್ದರು.
ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಮಲ್ಹೋತ್ರಾ ಅವರು ಯುಎಸ್‌ನ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
33 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ವಿದ್ಯುತ್, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಹಣಕಾಸು ಮತ್ತು ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆರ್‌ಬಿಐ ಗವರ್ನರ್ ಆಗಿ ನೇಮಕಗೊಳ್ಳುವುದಕ್ಕೂ ಮುನ್ನ ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಂದಾಯ ಕಾರ್ಯದರ್ಶಿಯಾಗಿದ್ದರು.