KARNATAKA
ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಪರ ದನಿ ಎತ್ತಿದ್ದ ಸ್ಯಾಂಡಲ್ವುಡ್ ಬಾಲಿವುಡ್ ನಟಿಯರು..!
ಬೆಂಗಳೂರು, ಮಾರ್ಚ್ 15: ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಜೊಮ್ಯಾಟೊ ಸಂಸ್ಥೆಯಲ್ಲಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕಾಮರಾಜ್ ಪರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ.
ಈ ಘಟನೆಯಿಂದ ನೊಂದಿರುವ ವ್ಯಕ್ತಿ ಕಾಮರಾಜ್ ಅವರಿಗೆ ನ್ಯಾಯ ಸಿಗಬೇಕೆಂದು ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದ ಮೂಲಕ ಬೆಂಬಲ ನೀಡುತ್ತಿದ್ದಾರೆ. ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ ಆಗಿರುವ ಆಂಧ್ರ ಪ್ರದೇಶದ ಹಿತೇಶ್ ಚಂದ್ರಾಣಿ ಎಂಬುವರು ಊಟಕ್ಕಾಗಿ ಜೊಮ್ಯಾಟೊ ಆಯಪ್ ಮೂಲಕ ಆರ್ಡರ್ ಮಾಡಿದ್ದಾರೆ.
ಆರ್ಡರ್ ನೀಡಿ ಅರ್ಧ ಗಂಟೆಯಾದರೂ ಪುಡ್ ಡೆಲಿವರಿಯಾಗದಿದ್ದರಿಂದ ಅಸಮಾಧಾನಗೊಂಡು ಮಹಿಳೆ ಆರ್ಡರ್ ರದ್ದು ಮಾಡಿದ್ದರು. ತಡವಾಗಿ ಡೆಲಿವರಿ ಬಾಯ್ ಕಾಮರಾಜ್ ಊಟ ತೆಗೆದುಕೊಂಡು ಮನೆ ಬಳಿ ಬಂದಿದ್ದಾರೆ. ಆರ್ಡರ್ ಕ್ಯಾನ್ಸಲ್ ಮಾಡಿದ್ದು ವಾಪಸ್ ತೆಗದುಕೊಂಡು ಹೋಗಿ ಎಂದು ಮಹಿಳೆ ತಿಳಿಸಿದ್ದಾರೆ. ಇದರಿಂದ ಕೋಪದಿಂದಲೇ ಊಟದ ಪಾರ್ಸೆಲ್ ತೆಗೆದುಕೊಳ್ಳುವಂತೆ ಡೆಲಿವರಿ ಬಾಯ್ ಹೇಳಿದ್ದಾರೆ. ಆದರೆ ಮಹಿಳೆ ಮಾತ್ರ ಸ್ವೀಕರಿಸಿರಲಿಲ್ಲ.
ಇದರಿಂದ ರೊಚ್ಚಿಗೆದ್ದು ಮನೆಗೆ ನುಗ್ಗಿ ಟೇಬಲ್ ಮೇಲೆ ಪಾರ್ಸೆಲ್ ಇಟ್ಟು ‘ನಾನು ನಿಮ್ಮ ಮನೆಯ ಗುಲಾಮನಲ್ಲ ಎಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಕಾಮರಾಜ್ ಆಕೆಯ ಮುಖಕ್ಕೆ ಕೈಯಿಂದ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ನಂತರ ಹಲ್ಲೆಗೊಳಗಾದ ಮಹಿಳೆ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದು ವೈರಲ್ ಆಗುತ್ತಿದ್ದಂತೆಯೇ ಡೆಲಿವರಿ ಬಾಯ್ ಕಾಮರಾಜ್ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದರು. ಜೈಲಿನಿಂದ ಹೊರ ಬಂದ ನಂತರ ಕಾಮರಾಜ್ ತಮ್ಮ ವರ್ಷನ್ ಏನೆಂದು ವಿಡಿಯೋ ಹಂಚಿಕೊಂಡಿದ್ದರು.
ಮಹಿಳೆ ತನಗೆ ಚಪ್ಪಲಿಯಿಂದ ಹೊಡೆದು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಕಾಮರಾಜ್ ಪರ ದನಿ ಎತ್ತಿದ್ದಾರೆ. ನಡೆದಿರುವ ಘಟನೆಯಿಂದ ನೊಂದಿರುವುದು ಹಾಗೂ ಅನ್ಯಾಯ ಆಗುತ್ತಿರುವುದು ಡಿಲೆವರಿ ಬಾಯ್ ಕಾಮರಾಜ್ ಅವರಿಗೆ ಎಂದು ಸಾಕಷ್ಟು ಮಂದಿ ನಂಬುತ್ತಿದ್ದಾರೆ. ಅಲ್ಲದೆ ಕಾಮರಾಜ್ಗೆ ಬೆಂಬಲ ನೀಡುತ್ತಿದ್ದಾರೆ. ಈಗ ಸ್ಯಾಂಡಲ್ವುಡ್ ಸೆಲೆಬ್ರಿಟಿ ಹಾಗೂ ಬಾಲಿವುಡ್ ನಟಿಯರೂ ಕಾಮರಾಜ್ ಪರ ಟ್ವೀಟ್ ಮಾಡುವ ಮೂಲ ಬೆಂಬಲ ಸೂಚಿಸಿದ್ದಾರೆ.
So, food delivery is time-bound but justice is not? If the delivery man's version is found to be true, strict action must be taken for mischaractarization.
I hope justice is delivered swiftly too. #ZomatoDeliveryGuy #JusticeForKamaraj #Zomato pic.twitter.com/IpqxiEOCFO
— Pranitha Subhash (@pranitasubhash) March 14, 2021
ಸ್ಯಾಂಡಲ್ವುಡ್ ನಟಿ ಪ್ರಣೀತಾ ಸುಭಾಷ್ ಟ್ವೀಟ್ ಮಾಡಿದ್ದು, ಆಹಾರ ವಿತರಣೆ ಸಮಯಕ್ಕನುಗುಣವಾಗಿರುತ್ತದೆ ಆದರೆ ನ್ಯಾಯ..? ಕಾಮರಾಜ್ ಅವರು ಹೇಳುತ್ತಿರುವುದು ನಿಜ ಎನಿಸುತ್ತಿದೆ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪ್ರಣೀತಾ ಸುಭಾಷ್ ಆಗ್ರಹಿಸಿದ್ದಾರೆ.
Zomato India – PLEASE find and publicly report the truth.. If the gentleman is innocent (and I believe he is), PLEASE help us penalise the woman in question. This is inhuman, shameful and heartbreaking .. Please let me know how I can help.. #ZomatoDeliveryGuy @zomato @zomatoin
— Parineeti Chopra (@ParineetiChopra) March 14, 2021
ಇನ್ನು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಸಹ ತಮ್ಮ ಟ್ವಿಟರ್ನಲ್ಲಿ ಕಾಮರಾಜ್ ಪರ ಟ್ವೀಟ್ ಮಾಡಿದ್ದಾರೆ. ಜೊಮ್ಯಾಟೊ ಇಂಡಿಯಾ ಈ ಘಟನೆಯಲ್ಲಿ ಸತ್ಯ ಏನೆಂಬುದನ್ನು ಪತ್ತೆ ಹಚ್ಚಿ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿ. ಡಿಲೆವರಿ ಬಾಯ್ ಅವರು ಯಾವುದೇ ತಪ್ಪು ಮಾಡಿಲ್ಲವಾದಲ್ಲಿ ಮಹಿಳೆಯ ವಿರುದ್ಧ ಕ್ರಮ ಜರುಗಿಸಬೇಕು. ಇದು ಮಾನವೀಯತೆ ಅಲ್ಲ. ನನ್ನ ಕಡೆಯಿಂದ ಯಾವ ರೀತಿಯ ಸಹಾಯ ಬೇಕೆಂದು ದಯವಿಟ್ಟು ತಿಳಿಸಿ ಎಂದಿದ್ದಾರೆ ನಟಿ.