LATEST NEWS
ಶಬರಿಮಲೆಗೆ ಹೊರಟ ಮಹಿಳಾ ಕಾರ್ಯಕರ್ತೆಯರಿಗೆ ಸುಪ್ರೀಂಕೋರ್ಟ್ ನಲ್ಲಿ ಮುಖಭಂಗ
ಶಬರಿಮಲೆಗೆ ಹೊರಟ ಮಹಿಳಾ ಕಾರ್ಯಕರ್ತೆಯರಿಗೆ ಸುಪ್ರೀಂಕೋರ್ಟ್ ನಲ್ಲಿ ಮುಖಭಂಗ
ಕೇರಳ ಡಿಸೆಂಬರ್ 13: ಕಳೆದ ಬಾರಿಯಂತೆ ಮತ್ತೆ ಪೊಲೀಸ್ ಸರ್ಪಗಾವಲಿನಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಯತ್ನಿಸುತ್ತಿದ್ದ ಮಹಿಳಾ ಕಾರ್ಯಕರ್ತೆಯರಿಗೆ ಸುಪ್ರೀಂಕೋರ್ಟ್ ನಲ್ಲಿ ಮುಖಭಂಗವಾಗಿದೆ. ಪೊಲೀಸ್ ರಕ್ಷಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಮಹಿಳೆಯರು ಸುರಕ್ಷಿತವಾಗಿ ಪ್ರವೇಶಿಸಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸದ್ಯ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.
ಕೇರಳದ ಇಬ್ಬರು ಮಹಿಳೆಯರು ದೇಗುಲ ಪ್ರವೇಶದ ವೇಳೆ ಪೊಲೀಸರ ರಕ್ಷಣೆಯನ್ನು ಕೋರಿ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೊಬ್ಡೆ, ಸಾವಿರಾರು ವರ್ಷಗಳಿಂದಲೂ ಈ ಅಭ್ಯಾಸವನ್ನು ರೂಡಿಸಿಕೊಂಡು ಬರಲಾಗಿದೆ. ಹೀಗಾಗಿ ಇಂದಿನ ಪರಿಸ್ಥಿತಿಯಲ್ಲಿ ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕಾಗಿರುವುದರಿಂದಾಗಿ ನಿಮ್ಮ ಪರವಾಗಿ ತೀರ್ಪು ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ಸಮಸ್ಯೆಯು ಭಾವನಾತ್ಮಕ ವಿಚಾರವಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಾಲಯ ಯಾವುದೇ ಆದೇಶವನ್ನು ನೀಡಿದರೆ ಅದು ಹಿಂಸಾಚಾರಕ್ಕೆ ತಿರುಗುವ ಎಲ್ಲ ಸಾಧ್ಯತೆಗಳು ಇವೆ ಎಂದರು.
ಅರ್ಜಿದಾರರ ಕುರಿತು ಮಾತನಾಡಿದ ಬೊಬ್ಡೆ, ಇದೊಂದು ಭಾವನಾತ್ಮಕ ವಿಚಾರವಾಗಿದೆ ಮತ್ತು ಅರ್ಜಿದಾರರು ವಿಸ್ತೃತ ಪೀಠವು ಸಮಸ್ಯೆ ಕುರಿತು ತೀರ್ಮಾನ ಕೈಗೊಳ್ಳುವವರೆಗೂ ಕಾಯಬೇಕು. ಅರ್ಜಿದಾರರು ತಾಳ್ಮೆಯಿಂದಿರಬೇಕು. ನಿಮ್ಮ ಪರವಾಗಿ ವಿಚಾರವನ್ನು ಕೈಗೊಂಡರೆ, ಬಳಿಕ ನಾವು ಖಂಡಿತವಾಗಿಯೂ ಆದೇಶವನ್ನು ನೀಡುತ್ತೇವೆ. ಆದರೆ ಸ್ವಲ್ಪ ತಾಳ್ಮೆಯಿಂದಿರಿ ಎಂದು ಹೇಳಿದರು.