ಅಳಿವಿನಂಚಿನಲ್ಲಿರುವ ಕನ್ನಡ ಶಬ್ದಗಳ ಮಹತ್ವ ಸಾರುವ ಕನ್ನಡ ಕಿರುಚಿತ್ರ “ಸತ್ತಕೊನೆ”

ಮಂಗಳೂರು, ಡಿಸೆಂಬರ್ 14: ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಾಗೂ ಕನ್ನಡ ಭಾಷೆಯ ಮಹತ್ವ ಸಾರುವ ಹಿನ್ನಲೆಯಲ್ಲಿ ಪಣತೊಟ್ಟಿರುವ ಯುವಕರ ತಂಡ ನಿರ್ಮಿಸಿದ ವಿಭಿನ್ನ ಕನ್ನಡ ಕಿರುಚಿತ್ರ ” ಸತ್ತಕೊನೆ” ಇಂದು ಬಿಜೈನ ಭಾರತ್ ಸಿನಿಮಾದಲ್ಲಿ ಬಿಡುಗಡೆಯಾಗಿದೆ.

ಚಿತ್ರದ ನಿರ್ದೇಶಕ ಯಶ್ ರಾಜ್ ಟಿ.ಎಚ್ ಅವರ ಹೆತ್ತವರಾದ ಹಿಮಕರ್ ಹಾಗೂ ಲೀಲಾ ದಂಪತಿಗಳು ದೀಪ ಬೆಳಗಿಸುವ ಮೂಲಕ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. ಎಕ್ಸ್ ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ನಿರ್ದೇಶಕ ಅಂಕುಶ್ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಿರು ಚಿತ್ರವನ್ನು ಇಷ್ಟೊಂದು ಅಚ್ಚುಕಟ್ಟಾಗಿ ನಿರ್ಮಿಸುವ ಮೂಲಕ ಚಿತ್ರ ತಂಡ ಉತ್ತಮ ಸಾಧನೆ ಮಾಡಿದೆ. ಕನ್ನಡ ಭಾಷೆಯ ಅಳಿವಿನ ಎಚ್ಚರಿಕೆಯ ಸಂದೇಶವೂ ಈ ಚಿತ್ರದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಚಿತ್ರವನ್ನು ಮಂಗಳೂರಿನ ಪ್ರತಿಭೆಗಳನ್ನೇ ಸೇರಿಸಿಕೊಂಡು ನಿರ್ಮಿಸಲಾಗಿದ್ದು, ಮಂಗಳೂರಿಗೆ ಜನತೆಗೆ ಇದೊಂದು ಹೆಮ್ಮೆಯ ವಿಚಾರವೂ ಆಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ತುಳು ಚಿತ್ರರಂಗದ ಖ್ಯಾತನಾಮರಾದ ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಲ್ ಬೈಲ್, ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ರಾಜೇಶ್ ಬ್ರಹ್ಮಾವರ್, ಚಿತ್ರ ನಿರ್ಮಾಪಕರಾದ ಮುಕೇಶ್ ಹೆಗ್ಡೆ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಗ್ಲಾಮರ್ ವ್ಯೂ ಪ್ರೊಡಕ್ಷನ್ಸ್ ಬಿಜೈ ಮಂಗಳೂರು ಬ್ಯಾನರ್ ನಲ್ಲಿ ಐನ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ಪುಷ್ಪಾ ಯಶ್ ರಾಜ್ ನಿರ್ಮಾಣದ ಈ ಕಿರುಚಿತ್ರದಲ್ಲಿ ರಂಗಿತರಂಗ ದ ರಫೀಕ್ ಖ್ಯಾತಿಯ ಕಾರ್ತಿಕ್ ವರದರಾಜ್, ಒಂದು ಮೊಟ್ಟೆ ಕಥೆ ಚಿತ್ರದ ನಟಿ ಶೈಲಶ್ರೀ ಮುಲ್ಕಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜೊತೆಯಲ್ಲಿ ಪುನಿತ್ ರಾಜ್, ಮಾಸ್ಟರ್ ಆರ್ಯನ್, ಶ್ರೀಮತಿ.ಡಿ. ನಾಯಕ್ ಹಾಗೂ ಯಶ್ ರಾಜ್ ಟಿ.ಎಚ್ ನಟಿಸಿದ್ದಾರೆ. ಈ ಚಿತ್ರಕ್ಕೆ ಡಾ. ನಿತಿನ್ ಆಚಾರ್ಯ ಸಂಗೀತ ನೀಡಿದ್ದು, ಕಲಾ ನಿರ್ದೇಶನ ಪ್ರಮೋದ್ ರಾಜ್, ಕಥೆ-ಸಂಭಾಷಣೆ-ಸಾಹಿತ್ಯ ಸಂದೇಶ್ ಬಿಜೈ ನೀಡಿದ್ದಾರೆ. ಹರ್ಶಿತ್ ಬಳ್ಳಾಲ್ ರ ಛಾಯಾಗ್ರಹಣ ಹಾಗೂ ಸಂಕಲನ, ಅಜಿತ್ ಉಚ್ಚಿಲ್ ರ ದ್ರೋಣ್ ಹಾಗೂ ಗಿಂಬಲ್ ಕೈಚಳಕ , ಶಿನೋಯ್.ವಿ. ಜೋಸೆಫ್ ರ ಸೌಂಡ್ ಮಿಕ್ಸಿಂಗ್ ಮತ್ತು ಇಫೆಕ್ಟ್ಸ್ ಹಾಗೂ ಕಿರಣ್ ಬಾಳಿಗರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ರಂಗಭೂಮಿ, ಚಿತ್ರರಂಗ, ಎಫ್.ಎಂ. ರೆಡಿಯೋ ಮುಂತಾದ ಮಾಧ್ಯಮಗಳಲ್ಲಿ ಗುರುತಿಸಿಕೊಂಡಿರುವ ಯಶ್ ರಾಜ್ ಟಿ. ಎಚ್ ಚಿತ್ರಕಥೆ ಬರೆದು ಈ ಕಿರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಕಿರುಚಿತ್ರವು ರಾಷ್ಟ್ರಮಟ್ಟದಲ್ಲಿ ನಡೆಯುವ ಕ್ಲಬ್ಬೀ ಮಿನಿ ಮೂವಿ ಫೆಸ್ಟಿವಲ್ ನ ಪ್ರಥಮ ಸುತ್ತಿನ ಸ್ಕ್ರೀನಿಂಗ್ ಗೂ ಆಯ್ಕೆಯಾಗಿರುವುದು ವಿಶೇಷವಾಗಿದೆ.

Facebook Comments

comments