LATEST NEWS
ಮಾಹಿತಿಹಕ್ಕು ಕಾಯ್ದೆ ಉಲ್ಲಂಘನೆ ಮಾಡುತ್ತಿದೆ ಸುಳ್ಯ ತಹಶಿಲ್ದಾರ್ ಕಛೇರಿ

ಮಾಹಿತಿಹಕ್ಕು ಕಾಯ್ದೆ ಉಲ್ಲಂಘನೆ ಮಾಡುತ್ತಿದೆ ಸುಳ್ಯ ತಹಶಿಲ್ದಾರ್ ಕಛೇರಿ
ಪುತ್ತೂರು ಅಕ್ಟೋಬರ್ 10; ಮಾಹಿತಿ ಹಕ್ಕಿನಡಿ ಸಲ್ಲಿಸಿದ ಅರ್ಜಿಗೆ ಮಾಹಿತಿ ನೀಡದೆ ಮಾಹಿತಿ ಹಕ್ಕು ಹೋರಾಟಗಾರನಿಗೆ ಸತಾಯಿಸಿದ ಘಟನೆ ಸುಳ್ಯ ತಹಶಿಲ್ದಾರ್ ಕಛೇರಿಯಿಂದ ನಡೆದಿದೆ.
ಪುತ್ತೂರಿನ ಮಾಹಿತಿ ಹಕ್ಕು ಹೋರಾಟಗಾರರಾದ ಸಂಜೀವ ಕಬಕ ಅವರು ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ 2015 ರ ಸಾಲಿನಲ್ಲಿ ದಾಖಲಾದ ಜನನ ಹಾಗೂ ಮರಣ ವಿವರಗಳನ್ನು ಮಾಹಿತಿ ಅಧಿಕಾರಿಯಾದ ಸುಳ್ಯ ತಹಶಿಲ್ದಾರರಿಗೆ ಸಲ್ಲಿಸಿದ್ದರು.

ಅರ್ಜಿಗೆ ಸಂಬಂಧಿಸಿದ ಶುಲ್ಕ ಹಾಗೂ ಮಾಹಿತಿಗೆ ಸಂಬಂಧಿಸಿದ ಶುಲ್ಕವನ್ನೂ ಅಂಚೆ ಮುಖಾಂತರ ನೀಡಿದ್ದರು. ಆದರೆ ಸುಳ್ಯ ತಹಶಿಲ್ದಾರ್ ಮಾಹಿತಿ ಬೇಕಿದ್ದರೆ ತಮ್ಮ ಕಛೇರಿಗೆ ಬಂದು ಪಡೆಯುವಂತೆ ಹಿಂಬರಹ ನೀಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಕೋರಲಾಗುವ ಅರ್ಜಿಯ ಪ್ರತಿ ಪುಟಕ್ಕೆ 2 ರೂಪಾಯಿಗಳನ್ನು ಪಾವತಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕೆಂಬ ನಿಯಮವಿದ್ದು, ಈ ಹಣವನ್ನು ಖುದ್ದಾಗಿ, ಅಂಚೆ ಮುಖಾಂತರ ಸೇರಿದಂತೆ ಎಲ್ಲಾ ರೂಪದಲ್ಲೂ ಪಾವತಿಸಬಹುದಾಗಿದೆ. ಹಾಗೂ ಮಾಹಿತಿ ಕೋರಿದ ವ್ಯಕ್ತಿಯನ್ನು ಕಛೇರಿಗೆ ಬರುವಂತೆ ಒತ್ತಾಯಿಸುವಂತಿಲ್ಲ ಎನ್ನುವ ನಿಯಮವೂ ಇದೆ.
ಆದರೆ ಸುಳ್ಯ ತಹಶಿಲ್ದಾರ್ ಮಾಹಿತಿ ಕೋರಿದ ವ್ಯಕ್ತಿಯನ್ನು ಕಛೇರಿಗೆ ಬಂದು ಶುಲ್ಕ ಪಾವತಿಸುಂತೆ ಆದೇಶಿಸಿರುವುದು ಮಾಹಿತಿಹಕ್ಕು ಅಧಿನಿಯಮದ ಉಲ್ಲಂಘನೆಯಾಗಿದೆ. ಈ ಮೂಲಕ ಮಾಹಿತಿ ಹಕ್ಕು ಮೂಲಕ ಮಾಹಿತಿ ಕೋರುವವರ ದಾರಿ ತಪ್ಪಿಸುವ ಯತ್ನ ಅಧಿಕಾರಿಗಳಿಂದ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.