LATEST NEWS
ಎಲ್ಲೆಂದರಲ್ಲಿ ರಾಮಮಂದಿರದಂತ ವಿವಾದ ಹುಟ್ಟುಹಾಕಿ ಹಿಂದೂ ನಾಯಕರಾಗಲು ಹೋಗಬೇಡಿ – ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಪುಣೆ ಡಿಸೆಂಬರ್ 20: ದೇಶದಲ್ಲಿ ವಿವಿಧ ಮಸೀದಿಗಳು ದೇವಸ್ಥಾನಗಳೆಂಬ ವಿಚಾರಕ್ಕೆ ನಡೆಯುತ್ತಿರುವ ವಿವಾದಕ್ಕೆ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಅಸಮಧಾನ ಹೊರಹಾಕಿದ್ದು, ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ. ಈ ಹೊಸ ವಿವಾದಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶ ಸೌಹಾರ್ದಯುತವಾಗಿ ಬದುಕಬಲ್ಲದು ಎಂಬುದನ್ನು ಜಗತ್ತಿಗೆ ಸಾರುವ ಅಗತ್ಯವಿದೆ ಎಂದರು. ರಾಮ ಮಂದಿರ ನಿರ್ಮಾಣದ ನಂತರ ಕೆಲವರು ಹೊಸ ಜಾಗಗಳಲ್ಲಿ ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದೂಗಳ ನಾಯಕರಾಗಬಹುದು ಎಂದು ಭಾವಿಸುತ್ತಾರೆ. ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಭಾರತದಲ್ಲಿ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಎಂಬುದಿಲ್ಲ, ಎಲ್ಲರೂ ಒಂದೇ ಎಂದು ಹೇಳಿದರು. ತಮ್ಮ ತಪ್ಪುಗಳಿಂದ ಭಾರತೀಯರು ಪಾಠ ಕಲಿಯಬೇಕು, ವಿವಾದಾತ್ಮಕ ವಿಷಯಗಳನ್ನು ತಪ್ಪಿಸುವ ಮೂಲಕ ಒಳ್ಳೆಯತನಕ್ಕೆ ಮಾದರಿಯಾಗಬೇಕು. ಉಗ್ರವಾದ, ಆಕ್ರಮಣಶೀಲತೆ, ಬಲಪ್ರಯೋಗ ಮತ್ತು ಇತರರ ದೇವರನ್ನು ಅವಮಾನಿಸುವುದು ನಮ್ಮ ಸಂಸ್ಕೃತಿಯಲ್ಲ ಎಂದು ಒತ್ತಿ ಹೇಳಿದರು.
ಉತ್ತರ ಪ್ರದೇಶದ ಸಂಭಾಲ್‌ನ ಶಾಹಿ ಜಾಮಾ ಮಸೀದಿ ಮತ್ತು ರಾಜಸ್ಥಾನದ ಅಜ್ಮೀರ್ ಷರೀಫ್‌ನಂತಹ ಧಾರ್ಮಿಕ ಸ್ಥಳಗಳ ಮೂಲದ ಬಗ್ಗೆ ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ.