FILM
ತಿಂಗಳಿಗೆ ನಾಲ್ಕು ಲಕ್ಷ ಜೀವನಾಂಶ ಸಾಕಾಗುವುದಿಲ್ಲ ಎಂದ ಕ್ರಿಕೆಟಿಗ ಮೊಹಮ್ಮದ್ ಶಮಿ ವಿಚ್ಚೇದಿತ ಪತ್ನಿ ಹಸೀನ್ ಜಹಾನ್

ಕೊಲ್ಕತ್ತಾ ಜುಲೈ 03: ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ವಿಚ್ಚೇದಿತ ಪತ್ನಿ ಹಸೀನ್ ಜಹಾನ್ ಶಮಿ ಜೀವನಾಂಶವಾಗಿ ತಿಂಗಳಿಗೆ ನೀಡುವ ನಾಲ್ಕು ಲಕ್ಷ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ಮಾಡೆಲ್ ಆಗಿದ್ದ ಹಸೀನ್ ಜಹಾನ್ ಅವರು 2014 ರಲ್ಲಿ ಮೊಹಮ್ಮದ್ ಶಮಿ ಅವರನ್ನು ಮದುವೆಯಾದರು. 2015 ರಲ್ಲಿ ದಂಪತಿಗೆ ಐರಾ ಎಂಬ ಮಗಳು ಹುಟ್ಟಿದಳು. 2018 ರಲ್ಲಿ ಶಮಿ ಮತ್ತು ಹಸೀನ್ ಜಹಾನ್ ಬೇರ್ಪಟ್ಟರು. ಈ ವೇಳೆ ಹಸೀನ್ ಜಹಾನ್ ಅವರು ಮೊಹಮ್ಮದ್ ಶಮಿ ತಮ್ಮನ್ನು ದೈಹಿಕವಾಗಿ ಹಿಂಸೆ ಮಾಡಿದರು ಎಂದು ಆರೋಪಿಸಿ ಶಮಿ ವಿರುದ್ಧ ದೂರು ದಾಖಲಿಸಿದ್ದರು. ಶಮಿ ಮತ್ತು ಅವರ ಕುಟುಂಬ ತಮ್ಮನ್ನು ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಕುಟುಂಬ ನಿರ್ವಹಣೆಗಾಗಿ ತಿಂಗಳಿಗೆ 7 ಲಕ್ಷ ರೂಪಾಯಿ ನೀಡುವಂತೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ 4 ಲಕ್ಷ ನೀಡುವಂತೆ ನಿರ್ದೇಶನ ನೀಡಿದೆ.

ಕೋಲ್ಕತಾ ಹೈಕೋರ್ಟ್ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದು ದೊಡ್ಡ ಗೆಲುವಾಗಿದ್ದು ಬಹಳ ದಿನಗಳ ಹೋರಾಟದ ನಂತರ ತನಗೆ ನ್ಯಾಯ ಸಿಕ್ಕಿದೆ ಎಂದರು. “ದೇವರು ನನಗೆ ಗೆಲುವು ನೀಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಬಹಳ ದಿನಗಳಿಂದ ನಾನು ಇದಕ್ಕಾಗಿ ಹೋರಾಡುತ್ತಿದ್ದೆ. ಈಗ ನಾನು ನನ್ನ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮತ್ತು ಆರಾಮವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಆದರೂ ಶಮಿ ಅವರ ಇಂದಿನ ಆದಾಯ ಮತ್ತು ಜೀವನಶೈಲಿಗೆ ಹೋಲಿಸಿದರೆ ಈ ಮೊತ್ತ ಏನೂ ಅಲ್ಲ. ನಾವು ಸುಮಾರು ಏಳು ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ 10 ಲಕ್ಷ ರೂಪಾಯಿ ಕೇಳಿದ್ದೆವು. ಅಂದಿನಿಂದ ಶಮಿ ಅವರ ಆದಾಯ ಮತ್ತು ಹಣದುಬ್ಬರ (inflation) ಎರಡೂ ಹೆಚ್ಚಾಗಿದೆ” ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.