Connect with us

  DAKSHINA KANNADA

  ದೈವದ ಹರಕೆಗೆ ಹೆದರಿದ ಕಳ್ಳ : ಚಿನ್ನ ವಾಪಾಸ್

  ದೈವದ ಹರಕೆಗೆ ಹೆದರಿದ ಕಳ್ಳ – ಚಿನ್ನ ವಾಪಾಸ್

  ಮಂಗಳೂರು ಸೆಪ್ಟೆಂಬರ್ 19:- ಮನೆಯಿಂದ 99 ಪವನ್ ಚಿನ್ನ ಮತ್ತು ಹದಿಮೂರು ಸಾವಿರ ನಗದು ಕದ್ದ ಕಳ್ಳರು ಎರಡು ದಿನ ಕಳೆದ ಮೇಲೆ ಪೂರ್ತಿ ಚಿನ್ನ ಮತ್ತು ನಗದನ್ನು ಮನೆಯ ಅಂಗಳಕ್ಕೆ ಬಿಸಾಡಿ ಹೋದ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆದಿದೆ.
  ಮಂಗಳೂರಿನ ಆಡುಮರೋಳಿ ನಿವಾಸಿ ಶೇಖರ್ ಕುಂದರ್ ರವರ ಮನೆಯಿಂದ ಶನಿವಾರ ಮಧ್ಯಾಹ್ನ ಕಳವಾಗಿತ್ತು. ನಾಲ್ವರು ದುಷ್ಕರ್ಮಿಗಳು ಶನಿವಾರ ಮಧ್ಯಾಹ್ನ ಹಿಂಬಾಗಿಲನ್ನು‌ ಒಡೆದು ಮನೆಗೆ ನುಗ್ಗಿ ಕಪಾಟು ತೆರೆದು ಲಾಕರ್ ನಲ್ಲಿದ್ದ ಚಿನ್ನ ಮತ್ತು ನಗದನ್ನು ದೋಚಿದ್ದರು.


  ಘಟನೆ ನಡೆದು ಎರಡು ದಿನ ಬಳಿಕ ಅಂದ್ರೆ ನಿನ್ನೆ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಕಾಗದದಲ್ಲಿ ಸುತ್ತಿ ಚಿನ್ನವನ್ನು ಎಸೆದು ಹೋಗಿದ್ದಾರೆ. ಅಲ್ಲದೆ ಕಾಗದದಲ್ಲಿ ಪತ್ರವನ್ನೂ ಬರೆದಿದ್ದಾರೆ.

  ಕಳ್ಳ ಬರೆದ ಲೆಟರ್ :

  ದಿನಾಂಕ 16-09-2017 ರಂದು ಬೆಳಿಗ್ಗೆ ಸುಮಾರು 12.30ರ ಸಮಯ ನಾನು ಮತ್ತು ನನ್ನ ಸಹಪಾಠಿ ನಾಗುರಿ ಕಡೆಯಿಂದ ಬರುವಾಗ ನನ್ನ ವಾಹನದ ಪೆಟ್ರೋಲ್ ಖಾಲಿಯಾಗಿತ್ತು. ಹೀಗಾಗಿ ಪೆಟ್ರೋಲ್ ತರಲು ಹೋಗುವಾಗ ಅಲ್ಲೇ ರಸ್ತೆಯ ಸಮೀಪದ ಒಂದು ಮನೆಯಲ್ಲಿ ಶಬ್ದ ಕೇಳಿತು. ನೋಡುವಾಗ ಯಾರೋ ನಾಲ್ಕು ಮಂದಿ ಕಂಪೌಂಡ್ ಹಾರಿ ಹೋಗುವುದನ್ನ ಕಂಡೆ, ಅವ್ರಲ್ಲಿ ಕೈಯ್ಯಲ್ಲಿ ಪ್ಲಾಸ್ಟಿಕ್ ಚೀಲಗಳಿದ್ದವು.

  ಅವರ ಹಿಂದೆ ಹೋಗಿ ಇಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳಿದೆ. ಆಗ ಅವರು ನನಗೆ ಸರಿಯಾಗಿ ಉತ್ತರಿಸದೇ ಚೀಲದಲ್ಲಿ ಏನಿದೆ ಎಂದು ಕೇಳಿದಾಗ ನನಗೆ ಹೊಡೆಯಲು ಬಂದರು. ಆಗ ನಾನು ಬೊಬ್ಬೆ ಹಾಕಿ ಅವರ ಹಿಂದೆ ಓಡಿ ಒಬ್ಬನನ್ನ ಹಿಡಿದಾಗ ಅವನ ಕೈಯ್ಯಲ್ಲಿದ್ದ ಒಂದು ಚೀಲ ನನಗೆ ಸಿಕ್ಕಿತು. ಇನ್ನೊಂದು ಚೀಲದ ಜೊತೆ ಅವರು ತಪ್ಪಿಸಿಕೊಂಡರು. ಆಗ ಚೀಲ ನೋಡಿದಾಗ ಅದರಲ್ಲಿ ಚಿನ್ನವಿತ್ತು.

  ಹೀಗಾಗಿ ಪೊಲೀಸರಿಗೆ ಒಪ್ಪಿಸಲು ತೀರ್ಮಾನಿಸಿದ್ರೂ ನನಗೆ ದೈರ್ಯ ಬರಲಿಲ್ಲ. ಪೊಲೀಸರು ನನ್ನ ಮೇಲೆಯೇ ಅನುಮಾನ ಪಡುತ್ತಾರೆ ಎಂದು ಅದನ್ನು ಮನೆಗೆ ತೆಗೆದುಕೊಂಡು ಹೋದೆ. ಆದರೆ ರಾತ್ರಿ ನಿದ್ದೆ ಬರಲಿಲ್ಲ. ಹೀಗಾಗಿ ಬೇರೆಯವರ ಚಿನ್ನ ನನಗ್ಯಾಕೆ ಎಂದು ತಿಳಿದು ನಿಮ್ಮ ಮನೆಯಲ್ಲಿ ಇಟ್ಟು ಹೋಗುತ್ತಿದ್ದೇನೆ.
  ಮತ್ತೊಂದು ನನ್ನ ಕಡೆಯಿಂದ ವಿನಂತಿ. ಇಷ್ಟು ಚಿನ್ನವನ್ನ ಬ್ಯಾಂಕಿನಲ್ಲಿ ಇಡಿ, ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಏಕೆಂದ್ರೆ ಎಲ್ಲೆಡೆಯೂ ಕಳ್ಳರಿದ್ದಾರೆ ಜಾಗೃತೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಮಾಡಿದ ತಪ್ಪಿಗೆ ನನ್ನನ್ನು ಶಿಕ್ಷಿಸಬೇಡಿ. ಹಾಗೆ ಮಾಡಿದ್ರೆ ನಾನು ಮತ್ತು ನನ್ನ ತಾಯಿ ಜೀವ ಕಳೆದುಕೊಳ್ಳಬೇಕಾಗಬಹುದು. ಜಯನಗರ ಬಳಿಯ ಸಿಸಿ ಕ್ಯಾಮಾರ ಚೆಕ್ ಮಾಡಿದ್ರೆ ಸುಳಿವು ಸಿಗಬಹುದು.. ನಮ್ಮದು ತಪ್ಪಾಯಿತು. ಕ್ಷಮಿಸಿ. ಇಷ್ಟೊಂದು ಚಿನ್ನವನ್ನು  ಬ್ಯಾಂಕಿನಲ್ಲಿ ಇಡಬೇಕಿತ್ತು. ಮನೆಯಲ್ಲಿ ಯಾಕಿಟ್ಟಿರಿ..? ಇನ್ನಾದರೂ ಜಾಗ್ರತೆ ವಹಿಸಿ ಎಂದು ಕಾಗದದಲ್ಲಿ ಬರೆಯಲಾಗಿದೆ.

  ಕಳವಾದ ಚಿನ್ನ ಮತ್ತೆ ಮರಳಿ ಬಂದಿರೋದು ಮನೆ ಮಂದಿಯನ್ನು ಖುಷಿಯನ್ನಾಗಿಸಿದೆ. ಆದ್ರೆ ಬೈಕ್ ನಲ್ಲಿ ಚಿನ್ನ ಎಸೆದು ಹೋದವರು ಯಾರು ಎಂಬುವುದು ಇನ್ನೂ ಪತ್ತೆಯಾಗಿಲ್ಲ. ಈ ಅಪರೂಪದ ವಿದ್ಯಾಮಾನ ಭಾರೀ ಕುತೂಹಲಗೊಳಿಸಿದ್ದು ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದೆ. ಚಿನ್ನ ಕಳೆದು ಹೋದ ಬಳಿಕ ಮನೆ ಮಂದಿ ದೈವಕ್ಕೆ ಹರಕೆ ನೀಡಿದ್ದು, ಹರಕೆ ವಿಷಯ ಗೊತ್ತಾದ ಕಳ್ಳರು ಭಯದಿಂದ ಚಿನ್ನ ಬಿಸಾಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply