LATEST NEWS
ತೊಕ್ಕೊಟಿನಲ್ಲೊಂದು ಹೈವೇ ಬಂದ್ ಮಾಡಿ ರಾಜಾರೋಷವಾಗಿ ನಡೆದ ಮದುವೆ
ತೊಕ್ಕೊಟಿನಲ್ಲೊಂದು ಹೈವೇ ಬಂದ್ ಮಾಡಿ ರಾಜಾರೋಷವಾಗಿ ನಡೆದ ಮದುವೆ
ಮಂಗಳೂರು ಜನವರಿ 26: ಮದುವೆ ಅಂದರೆ ಮದುವೆಯಲ್ಲಿ ಪಾಲ್ಗೊಂಡವರಿಗೂ, ಮದುವೆ ನೋಡುವವರಿಗೂ ಸಂತಸ ತರುವ ಸಂಗತಿ. ಮದುವೆಯಾಗುವ ಸಂದರ್ಭದಲ್ಲಿ ನಾಲ್ಕು ಬಡ ಕುಟುಂಬಗಳಿಗೆ ಊಟ ಕೊಡುವ, ಸಸಿ ಕೊಡುವ ಅಥವಾ ಇನ್ಯಾವುದೋ ಜನರಿಗೆ ಉಪಕಾರಿಯಾಗುವಂತಹ ಮದುವೆಯಾಗುವ ಮೂಲಕ ಸಮಾಜಕ್ಕೆ ಮಾದರಿಯಾಗುವ ಮದುವೆಗಳಿವೆ.
ಆದರೆ ದಕ್ಷಿಣಕನ್ನಡ ಜಿಲ್ಲೆಯ ತೊಕ್ಕೋಟಿನಲ್ಲಿರುವ ಯುನಿಟಿ ಎನ್ನುವ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮವೆಂದರೆ ಜನ ಹಿಡಿಶಾಪ ಹಾಕುವಂತಹ ವ್ಯವಸ್ಥೆ ನಿರ್ಮಾಣಗೊಳ್ಳುತ್ತದೆ. ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಈ ಹಾಲ್ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ.
ಇಲ್ಲಿ ಮದುವೆ ಕಾರ್ಯಕ್ರಮ ನಡೆಸುವ ಮಂದಿ ತನ್ನ ಸಾಮರ್ಥ್ಯವನ್ನು ಊರಿಡೀ ಪ್ರದರ್ಶಿಸಬೇಕು ಎನ್ನುವ ಕಾರಣಕ್ಕೆ ಇಡೀ ಲೋಕದಲ್ಲಿರುವ ತಮ್ಮವರನ್ನು, ತಮ್ಮದಲ್ಲದವರನ್ನೆಲ್ಲಾ ಮದುವೆಗೆ ಆಹ್ವಾನಿಸುವುದು ಸಾಮಾನ್ಯ.ಇದರಿಂದಾಗಿ ಮದುವೆಗೆ ಬರುವ ಮಂದಿ ಹೆದ್ದಾರಿಯ ಅಕ್ಕಪಕ್ಕದಲ್ಲಿ, ಕೆಲವೊಮ್ಮೆ ಹೆದ್ದಾರಿಯಲ್ಲೇ ವಾಹನ ಪಾರ್ಕ್ ಮಾಡಿ ಹೋಗುತ್ತಾರೆ.ಇದರಿಂದಾಗಿ ಹೆದ್ದಾರಿ ಸಂಪೂರ್ಣ ಬ್ಲಾಕ್ ಆಗಿ ಪ್ರಯಾಣಿಕರು ಗಂಟೆ ಗಟ್ಟಲೆ ರಸ್ತೆಯಲ್ಲೇ ಕಾಯಬೇಕಾದ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ.
ಜನವರಿ 26 ರಂದು ಇದೇ ರೀತಿಯ ಮದುವೆಯೊಂದು ಈ ಸಭಾಂಗಣದಲ್ಲಿ ನಡೆದಿದೆ.ಕಂಡವರ ಮದುವೆಯಲ್ಲಿ ಉಂಡವರೇ ಜಾಣ ಎಂಬಂತೆ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕ್ ಮಾಡಿ ಹೋದ ಪರಿಣಾಮ ಹೆದ್ದಾರಿ ಸಂಪೂರ್ಣ ಬ್ಲಾಕ್ ಆಗಿತ್ತು.
ಸ್ಥಳಕ್ಕೆ ದಾವಿಸಿದ ಪೋಲೀಸರು ಕಾನೂನುಬಾಹಿರವಾಗಿ ಪಾರ್ಕ್ ಮಾಡಿದ ವಾಹನಗಳನ್ನು ತೆರವುಮಾಡುವ ಬದಲು ಮದುವೆಗೆ ಬಂದವರ ವಾಹನಗಳಿಗೆ ದಾರಿ ತೋರಿಸುವ ಸೆಕ್ಯುರಿಟಿ ಗಾರ್ಡ್ ಗಳಂತೆ ಕಾರ್ಯ ನಿರ್ವಹಿಸಿದ್ದಾರೆ. ತನ್ನ ಸಾಮರ್ಥ್ಯ ತೋರಿಸಲು ಇಂಥ ಮದುವೆ ಅಡುವ ಮಂದಿ ಹೆದ್ದಾರಿ ಬದಿ ಬಿಟ್ಟು ಯಾರಿಗೂ ತೊಂದರೆಯಾಗದ ದೊಡ್ಡ ಮೈದಾನದಲ್ಲಿ ಮದುವೆ ಕಾರ್ಯಕ್ರಮವಿಡುವುದು ಒಳಿತು.
ಹೆದ್ದಾರಿ ಬ್ಲಾಕ್ ನಿಂದಾಗಿ ಕೆಲಸ ಮುಗಿಸಿ ಬರುವ ಮಹಿಳೆಯರಿಗೆ, ಶಾಲೆ ಮುಗಿಸಿ ಬರುವ ಮಕ್ಕಳು ಮನೆ ಸೇರಲೂ ಅಡಚಣೆಯಾಗುತ್ತಿದೆ. ತುರ್ತುಸೇವೆಯನ್ನು ಒದಗಿಸುವ ಅಂಬ್ಯುಲೆನ್ಸ್ ಗಳಿಗೂ ಇಲ್ಲಿ ಬ್ಲಾಕ್ ತಪ್ಪುವುದಿಲ್ಲ. ಮದುವೆಯಾಗಿ ಸಂಭ್ರಮಿಸೋದು ನಿಮ್ಮ ಇಷ್ಟ, ಅದರೆ ನಿಮ್ಮ ಇಷ್ಟ ಇನ್ನೊಬ್ಬನಿಗೆ ಕಷ್ಟವಾಗದಂತಿರಲಿ.