LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬತ್ತಿ ಹೋಗುತ್ತಿರುವ ನದಿಗಳು
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬತ್ತಿ ಹೋಗುತ್ತಿರುವ ನದಿಗಳು
ಮಂಗಳೂರು ಸೆಪ್ಟೆಂಬರ್ 16: ಕಳೆದ 20 ದಿನಗಳ ಹಿಂದೆ ನೀರಿನ ರುದ್ರ ನರ್ತನವನ್ನು ತೋರಿಸಿದ್ದ ನದಿಗಳು ಇಂದು ಬತ್ತಿ ಹೋಗುತ್ತಿದೆ. ಹೌದು ದಕ್ಷಿಣಕನ್ನಡ ಜಿಲ್ಲೆಯನ್ನು ಭಾಗಶ ಮುಳುಗಿಸಿದ್ದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ಇಂದು ನೀರಿನ ಮಟ್ಟ ಕುಸಿಯುತ್ತಿದೆ.
ಭಾರೀ ಮಳೆಯಿಂದಾಗಿ ಹಾಗೂ ಪ್ರಕೃತಿ ನಾಶದಿಂದಾಗಿ ಪಶ್ಚಿಮಘಟ್ಟಗಳ ಬೆಟ್ಟಗಳು ನೀರಾಗಿ ಹರಿದು ಪ್ರವಾಹದ ಭೀತಿ ಹುಟ್ಟಿಸಿದ್ದ ನದಿಗಳು ಇವುಗಳೇ ಎನ್ನುವ ಸಂಶಯ ಕಾಡುವಷ್ಟರ ಮಟ್ಟಿಗೆ ನೀರಿನ ಪ್ರಮಾಣ ಕುಸಿತವಾಗಿದೆ.
ಘಟ್ಟ ಪ್ರದೇಶಗಳ ಗುಡ್ಡಗಾಡುಗಳಿಂದ ಒರತೆ ನೀರೂ ಭಾಗಶ ನಿಂತು ಹೋದ ಪರಿಣಾಮ ಎರಡೂ ನದಿಗಳ ಒಡಲು ಇದೀಗ ಬರಿದಾಗಲಾರಂಭಿಸಿದೆ. ಕೇರಳದಲ್ಲಿ ಯಾವ ರೀತಿ ನದಿಗಳು ಹಾಗೂ ಅಂತರ್ಜಲ ಬತ್ತಿ ಹೋಗಿದೆಯೋ ಅಂಥಹುದೇ ಲಕ್ಷಣವನ್ನು ನೇತ್ರಾವತಿ ನದಿಯೀಗ ತೋರಿಸುತ್ತಿದೆ.
ಕಳೆದ 20 ದಿನಗಳ ಹಿಂದೆ ಮನೆಗೆ ನುಗ್ಗಿದ ನೀರು, ರಸ್ತೆಗೆ ನುಗ್ಗಿದ ನೀರು ಎನ್ನುವ ಸುದ್ಧಿ ಮಾಡುತ್ತಿದ್ದ ನದಿಗಳು ಇದೀಗ ಬರಿದಾಗಿ ಸುದ್ಧಿಯಲ್ಲಿದೆ. ಹೌದು ಪಶ್ಚಿಮಘಟ್ಟ ಹಾಗೂ ಕರಾವಳಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರ ಮತ್ತು ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿದಿತ್ತು.
ವಾರಗಟ್ಟಲೆ ನದಿಯಲ್ಲಿ ನೀರು ತಗ್ಗದೆ ಹಲವು ಕುಟುಂಬಗಳು ತೊಂದರೆಯನ್ನು ಅನುಭವಿಸಿತ್ತು. ಆದರೆ ಅಂದು ಉಕ್ಕಿ ಹರಿಯುತ್ತಿದ್ದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿಲ್ಲ. ಆಶ್ಚರ್ಯದ ಸಂಗತಿಯಾದರೂ ಇದು ಒಪ್ಪಿಕೊಳ್ಳಬಹುದಾದ ಸತ್ಯವಾಗಿದೆ.
ಮಳೆಗಾಲ ಇನ್ನೂ ಮುಗಿಯದ ಈ ಸಮಯದಲ್ಲಿ ಈ ಎರಡೂ ನದಿಗಳಲ್ಲಿ ನೀರಿನ ಮಟ್ಟ ಈ ರೀತಿ ಇಳಿಮುಖವಾಗಿರುವುದು ಈ ಭಾಗದ ಜನರ ಆತಂಕಕ್ಕೂ ಕಾರಣವಾಗಿದೆ. ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿದ್ದ ದೌರ್ಜನ್ಯದ ಫಲವೇನೋ ಎನ್ನುವ ರೀತಿಯಲ್ಲಿ ಸುರಿದ ಭರ್ಜರಿ ಮಳೆ ಇದೀಗ ನಿಂತು ತಿಂಗಳು ಕಳೆಯಲಾರಂಭಿಸಿದೆ.
ಆ ಸಂದರ್ಭದಲ್ಲಿ ಸುರಿದ ಹಾಗೂ ಹರಿದ ನೀರು ಇದೀಗ ಎಲ್ಲಿದೆ ಎಂದು ಈ ಎರಡೂ ನದಿಗಳಲ್ಲಿ ಹುಡುಕಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಸೆಪ್ಟಂಬರ್ ತಿಂಗಳಿನಲ್ಲೇ ಈ ರೀತಿಯ ಪರಿಸ್ಥಿತಿಯಾದಲ್ಲಿ , ಮುಂದಿನ ದಿನಗಳಲ್ಲಿ ಕರಾವಳಿಯ ಜನ ಭಾರೀ ತೊಂದರೆಯನ್ನು ಅನುಭವಿಸಬೇಕಾದ ಸ್ಥಿತಿಯೂ ನಿರ್ಮಾಣಗೊಳ್ಳಲಿದೆ.
ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿದಿತ್ತು. ಎರಡು ಬಾರಿ ಉಪ್ಪಿನಂಗಡಿ ಪರಿಸರದಲ್ಲಿ ಎರಡೂ ನದಿಗಳು ಮೂವತ್ತು ಮೀಟರ್ ಗೂ ಮಿಕ್ಕಿದ ಎತ್ತರದಲ್ಲಿ ಹರಿದಿತ್ತು.
ಕರಾವಳಿ ಜಿಲ್ಲೆಯಲ್ಲಿ ಅಂದು ಸುರಿದ ಮಳೆಯನ್ನು ಪರಿಗಣಿಸಿದಲ್ಲಿ , ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ ಎನ್ನುವ ಸಂತಸವೂ ವ್ಯಕ್ತವಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಆತಂಕಕಾರಿ ಬೆಳವಣಿಗೆಯ ಲಕ್ಷಣಗಳು ಕಂಡು ಬರಲಾರಂಭಿಸಿದೆ.
ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ತುಂಬಿ ಹರಿಯುತ್ತಿದ್ದ ನೇತ್ರಾವತಿ ನದಿಯೀಗ ಬತ್ತಿ ಹೋಗುತ್ತಿದೆ. ಕೇರಳ ರಾಜ್ಯವನ್ನು ಕಾಡಿದ್ದ ಪ್ರವಾಹದ ನದಿಗಳು ಇಂದು ಯಾವ ರೀತಿಯಲ್ಲಿ ಬತ್ತಿ ಹೋಗಿದೆಯೋ, ಅದೇ ರೀತಿಯ ಲಕ್ಷಣ ಇದೀಗ ನೇತ್ರಾವತಿ ನದಿಯಲ್ಲೂ ಕಂಡು ಬರಲಾರಂಭಿಸಿದೆ.
ಕಳೆದ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ತುಂಬಿ ಹರಿದಿದ್ದ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಮುಖವಾಗಿದೆ. ನೀರಿನಲ್ಲಿ ತುಂಬ ಹೋಗಿದ್ದ ನದಿಯೀಗ ಕೆಲವೆಡೆ ಮೈದಾನದ ರೀತಿಯಲ್ಲಿ ಬದಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದಕ್ಷಿಣಕನ್ನಡ ಜಿಲ್ಲೆಯ ಜನ ಮುಂದಿನ ದಿನಗಳಲ್ಲಿ ನೀರಿಗಾಗಿ ಪರಿತಪಿಸಬೇಕಾದ ಕಾಲ ಬರಲಿದೆ.