ಪುತ್ತೂರು,ಸೆಪ್ಟಂಬರ್ 5: ಸ್ನಾನಕ್ಕಾಗಿ ನೀರಿಗೆ ಇಳಿದ ಇಬ್ಬರು ನದಿ ಪಾಲಾದ ಘಟನೆ ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗೇರು ಸೇತುವೆಯ ಸಮೀಪ ನಡೆದಿದೆ.

ಕಡಬದ ಕುಟ್ರಿಪ್ಪಾಡಿ ನಿವಾಸಿಗಳಾದ ಹರಿ ಮತ್ತು ಸತ್ಯ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆಂದು ಬಂದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ದುರ್ಘಟನಾ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಅಗ್ನಿಶಾಮಕದಳದವರು ಇನ್ನಷ್ಟೇ ಸ್ಥಳಕ್ಕೆ ಭೇಟಿ ನೀಡಬೇಕಿದೆ.ಶನಿವಾರದಂದು ಇದೇ ಪರಿಸರದಲ್ಲಿ ಕುಮಾರಧಾರಾ ನದಿಗೆ ಸ್ಥಾನಕ್ಕೆಂದು ಬಂದ ಬಂಟ್ವಾಳದ ಪೊಳಲಿ ನಿವಾಸಿ ಹರಿ ಎಂಬವರು ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಯುತ್ತಿದ್ದ ಸಮಯದಲ್ಲೇ ಇಂದು ಮತ್ತೆ ಇಬ್ಬರು ನದಿ ಪಾಲಾಗಿದ್ದಾರೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರೂ, ನದಿಯಲ್ಲಿ ಈಜಲು ಹಾಗೂ ಸ್ಥಾನ ಮಾಡಲು ತೆರಳುವುದು ಅಪಾಯಕಾರಿ ಎಂದು ತಿಳಿದಿದ್ದರೂ, ಇಂಥಹ ಸಾಹಸಕ್ಕೆ ಕೈ ಹಾಕುವ ಮೂಲಕ ಜನ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ಏಕೆ ಎನ್ನುವ ಪ್ರಶ್ನೆಯೂ ಮೂಡಿ ಬರುತ್ತಿದೆ. ಸ್ಥಳಕ್ಕೆ ಕಡಬ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share Information