LATEST NEWS
ರಿಷಿ ಸುನಾಕ್ ಬ್ರಿಟನ್ ನೂತನ ಪ್ರಧಾನಿ
ಲಂಡನ್, ಅಕ್ಟೋಬರ್ 24: ಬ್ರಿಟನ್ ಪ್ರಧಾನಿ ಹುದ್ದೆ ರೇಸ್‌ನಿಂದ ಪೆನ್ನಿ ಮೊರ್ಡಂಟ್ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತ ಮೂಲದ ರಿಷಿ ಸುನಾಕ್ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೋರಿಸ್ ಜಾನ್ಸನ್ ಭಾನುವಾರ ಘೋಷಿಸಿದ್ದರಿಂದ ರಿಷಿ ಸುನಾಕ್ ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿತ್ತು. ಈಗ ಸುನಾಕ್‌ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಪ್ರತಿಸ್ಪರ್ಧಿ ಮೊರ್ಡಂಟ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಪಕ್ಷದ ಸದಸ್ಯರಿಂದ ಒತ್ತಡ ಕೇಳಿಬಂದಿತ್ತು. ಯುಕೆಯ ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರೊಬ್ಬರು ಪ್ರಧಾನಿಯಾದರೆಂಬ ಇತಿಹಾಸ ಕೂಡ ಸೃಷ್ಟಿಯಾಗಿದೆ.
ಮೊರ್ಡಂಟ್ ಅವರು 100 ಸಂಸದರ ಬೆಂಬಲ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸುನಾಕ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಶುಕ್ರವಾರ (ಅ.28) ರಂದು ಪ್ರಧಾನಿಯಾಗಿ ರಿಷಿ ಸುನಾಕ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎನ್ನಲಾಗಿದೆ. ರಿಷಿ ಸುನಾಕ್ ಅವರು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳೆದಿರುವ ಅವರು ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಕೇವಲ 45 ದಿನ ಆಡಳಿತ ನಡೆಸಿ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ ನಂತರ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಪ್ರಧಾನಿ ಸ್ಥಾನಕ್ಕೆ ಮತ್ತೆ ರಿಷಿ ಸುನಾಕ್ ಸ್ಪರ್ಧಿಸಿದ್ದರು. ಇವರಿಗೆ ಪೆನ್ನಿ ಮೊರ್ಡಂಟ್ ಪೈಪೋಟಿ ನೀಡಿದ್ದರು. ಮೊರ್ಡಂಟ್‌ಗೆ ಕೇವಲ 28 ಸಂಸದರು ಬೆಂಬಲ ಸೂಚಿಸಿದರು. ಸುನಾಕ್ ಪರವಾಗಿ 198 ಸಂಸದರು ಬೆಂಬಲ ವ್ಯಕ್ತಪಡಿಸಿದರು.