Connect with us

FILM

ರಾಷ್ಟ್ರ ಪ್ರಶಸ್ತಿ ಪಡೆದು ಮಂಗಳೂರಿಗೆ ಬಂದ ರಿಷಬ್ ಶೆಟ್ಟಿ: ದೈವದ ಪಾದಕ್ಕೆ, ದೈವ ನರ್ತಕರಿಗೆ ಪ್ರಶಸ್ತಿ ಅರ್ಪಿಸುತ್ತೇನೆ ಎಂದ ರಿಷಬ್

ಮಂಗಳೂರು: ಕಾಂತಾರ ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಮಂಗಳೂರಿಗೆ ಬಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಅಭಿಮಾನಿಗಳು ಅದ್ದೂರಿ‌ ಸ್ವಾಗತ ನೀಡಿದ್ದಾರೆ.‌ ಇದೇ ವೇಳೆ, ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಈ ರಾಷ್ಟ್ರೀಯ ಪ್ರಶಸ್ತಿ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. 200-300 ಜನ ಒಂದು ಕೋರ್ ಟೀಮ್ ಆಗಿ ಕೆಲಸ ಮಾಡಿದ್ದೇವೆ. ಈ ಸಿನಿಮಾ ದೈವದ ಬಗ್ಗೆ, ದೈವ ನರ್ತಕರ ಬಗ್ಗೆ ಅವರ ಸಮುದಾಯದ ಬಗ್ಗೆ ಇರುವ ಸಿನಿಮಾ. ನ್ಯಾಷನಲ್ ಅವಾರ್ಡ್ ಕ್ರೆಡಿಟ್ ದೈವ ನರ್ತಕ ಸಮುದಾಯಕ್ಕೆ ಸೇರಬೇಕು ಎಂದಿದ್ದಾರೆ.ದೈವದ ಆಶೀರ್ವಾದ ಇಲ್ಲ ಅಂದಿದ್ರೆ ಸಿನಿಮಾ ಈ ಮಟ್ಟಕ್ಕೆ  ಹೋಗುತ್ತಾ ಇರಲಿಲ್ಲ‌. ದೈವದ ಆಶೀರ್ವಾದದಿಂದ ಸಿನಿಮಾ ಇಲ್ಲಿ ತನಕ ಬಂದಿದೆ. ಆ ದೈವಕ್ಕೆ, ದೈವದ ಪಾದಕ್ಕೆ ಈ ಅವಾರ್ಡನ್ನ ಡೆಡಿಕೇಟ್ ಮಾಡುತ್ತೇನೆ. ಚಿತ್ರ ಮಾಡುವಾಗ ಅವಾರ್ಡ್ ಬರುತ್ತೆ ಎಂದು ಅಂದುಕೊಂಡಿರಲಿಲ್ಲ, ಎಲ್ಲಾ ಜನರ ಪ್ರೀತಿಯಿಂದ ಇದು ಸಾಧ್ಯವಾಗಿದೆ. ಕಾಂತಾರ 1 ಶೂಟಿಂಗ್ ನಡೆಯುತ್ತಿದೆ, ಆದಷ್ಟು ಬೇಗ ನಿರ್ಮಾಪಕರು ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರೆ. ಕಾಂತಾರ 1ನೇ ಭಾಗ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಈ ಹಿಂದೆ ಕಾಂತಾರಕ್ಕೆ ಎಷ್ಟು ಹೆಮ್ಮೆ ಪಟ್ಟಿದ್ದೀರೋ ಅದಕ್ಕಿಂತ ಹೆಚ್ಚು ಹೆಮ್ಮೆ ಪಡುತ್ತೀರ‌ ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ.

ಕಾಂತಾರ ಸಿನಿಮಾ ಬಳಿಕ ವಿವಿಧ ವೇದಿಕೆಯಲ್ಲಿ ಮನೋರಂಜನೆಗಾಗಿ ದೈವಾರಾಧನೆಗೆ ಅಪಮಾನ ಮಾಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಂತಾರ ಬರುವ ಮುಂಚೆ ಸುಮಾರು ಸಿನಿಮಾಗಳಲ್ಲಿ ದೈವಾರಾಧನೆ ವಿಚಾರ ಬಂದಿದೆ. ಚೋಮನ ದುಡಿಯಿಂದ ಇಲ್ಲಿಯ ವರೆಗೆ ಅನೇಕ ಟಿವಿ ಧಾರಾವಾಹಿಗಳಲ್ಲೂ ದೈವಾರಾಧನೆ ಪ್ರದರ್ಶನವಾಗಿದೆ. ನಾವು ಮೊದಲ ಬಾರಿಗೆ ಮಾಡಿದ್ದಲ್ಲ. ಹಲವಾರು ಭಾಗಗಳಲ್ಲಿ ಪ್ರದರ್ಶನವನ್ನೂ ಮಾಡಿದ್ದಾರೆ. ಎಷ್ಟೋ ತುಳು ಸಿನಿಮಾಗಳು ದೈವಾರಾಧನೆ ಬಳಸಿಕೊಂಡು ಪ್ರಶಸ್ತಿ ಪಡೆದಿವೆ. ಸಿನಿಮಾ ಬಂದಾಗ ತುಂಬಾ ಪಾಪ್ಯುಲರ್ ಆದಾಗ ಮೂಲ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಈ ರೀತಿ ಮಾಡುತ್ತಾರೆ. ಬೇರೆ ಬೇರೆ ಸ್ಟೇಜ್ ಗಳಲ್ಲಿ ಕಾರ್ಯಕ್ರಮದಲ್ಲಿ ದೈವದ ವೇಷ ಹಾಕುವಾಗ ನೋವಾಗುತ್ತೆ‌.

ನಾನು ಗುತ್ತಿನ ಮನೆಯವನಾಗಿ ದೈವವನ್ನ  ನಂಬಿಕೆ ಇಟ್ಟುಕೊಂಡು ಪೂಜೆ ಮಾಡಿಕೊಂಡು ಬರುವವನು. ನಾವು ಸಿನಿಮಾ ಮಾಡಬೇಕಾದರೆ ಆ ಸಮುದಾಯದವರ ಸಹಾಯ ಪಡೆದು ಮಾಡಿದ್ದೇವೆ. ಅಷ್ಟು ಶ್ರದ್ಧೆಯಿಂದ ಅದನ್ನ ಮಾಡಿಕೊಂಡು ಬಂದಿದ್ದೇವೆ. ನಮಗೆ ಕೇವಲ ಅದೊಂದು ಸಿನಿಮಾ ಅಲ್ಲ. ಸಿನಿಮಾದಲ್ಲಿ ಬಣ್ಣ ಹಚ್ಚುತ್ತೇವೆ, ವೇಷ ಹಾಕುತ್ತೇವೆ ಅನ್ನೋ ರೀತಿಯಲ್ಲ. ನಿಜವಾಗಲೂ ಅದೊಂದು ದೈವದ ಸೇವೆ ಅನ್ನೋ ರೀತಿ ಮಾಡಿಕೊಂಡು ಬಂದಿದ್ದೇವೆ. ಹೊರಗಿನವರು ಇದನ್ನ ಅಪಹಾಸ್ಯ ಮಾಡಿದಾಗ ನಂಬಿದವರಿಗೆ ಬೇಜಾರಾಗೋದು ಸಹಜ. ನಾನು ಆರಂಭದಿಂದಲೂ ಜನರಲ್ಲಿ ಮನವಿ ಮಾಡಿಕೊಂಡು ಬಂದಿದ್ದೇನೆ. ನಾನು ಕಾಂತಾರವನ್ನ ಸಿನಿಮಾದ ರೀತಿಯಲ್ಲಿ ಮಾಡಿಲ್ಲ. ಹೊರಗಿನವರಿಗೆ ದೈವವನ್ನ ಸ್ಟೇಜ್ ಮೇಲೆ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *