LATEST NEWS
ವಿಶ್ವಸಂಸ್ಥೆಯಲ್ಲಿ ರಿಷಬ್ ಶೆಟ್ಟಿಗೆ ಮಾತನಾಡ್ಲಿಕ್ಕೆ ಸಿಕ್ಕಿದ್ದು ಕೇವಲ 12 ಸೆಕೆಂಡ್ ಮಾತ್ರ….!!
ಜಿನೆವಾ ಮಾರ್ಚ್ 16: ಕಾಂತಾರ ಸಿನೆಮಾ ಮೂಲಕ ಕನ್ನಡ ಚಿತ್ರರಂಗವನ್ನು ವಿಶ್ವಕ್ಕೆ ಪರಿಚಯಿಸಿದ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಕನ್ನಡದಲ್ಲಿ ಮಾತನಾಡಿದ್ದಾರೆ.
ಸರಳ ಭಾರತೀಯ ಉಡುಗೆ ಬಿಳಿಯ ಬಣ್ಣದ ಖುರ್ತಾ ಧರಿಸಿ ಅದಕ್ಕೊಪ್ಪುವ ನೀಲಿ ಬಣ್ಣದ ವೇಸ್ ಕೋಟು ಧರಿಸಿದ್ದ ರಿಷಬ್ ಶೆಟ್ಟಿ, ಉತ್ಸಾಹದಿಂದ, ಆತ್ಮವಿಶ್ವಾಸದಿಂದ ಭಾಷಣ ಆರಂಭಿಸಿದರು. ವಿಶ್ವಸಂಸ್ಥೆಯ ಸಭೆಯಲ್ಲಿ ಭಾಷಣಕಾರರಿಗೆ ಸೀಮಿತ ಸಮಯ ನೀಡುವ ಕಾರಣ, ತುಸು ವೇಗವಾಗಿ ಭಾಷಣ ಓದಲು ಆರಂಭಿಸಿದ ರಿಷಬ್, ”ನಮಸ್ಕಾರ ನಾನು ರಿಷಬ್ ಶೆಟ್ಟಿ. ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಇಕೋಫಾರ್ಮ್ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ಪರಿಸರ ಸ್ವಚ್ಛತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ, ನಿರ್ದೇಶಕನಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದು ನನ್ನ ಉದ್ದೇಶ” ಎಂದರು.
ಆದರೆ ರಿಷಬ್ ಶೆಟ್ಟಿಯ ಭಾಷಣ ಬೇರೆ ಭಾಷೆಗಳಲ್ಲಿ ತರ್ಜುಮೆ ಆಗದ ಕಾರಣ ಅವರ ಭಾಷಣವನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಸಂರಕ್ಷಣೆ ಪರಿಷತ್ತಿನ ಉಪಾಧ್ಯಕ್ಷೆ ಮರಿಯಾ ಮೇರಿಯಲ್ ಮೆಕ್ಡೋನಲ್ ಅಲ್ವಾರೆಜ್ ತಡೆ ಹಿಡಿದರು. ‘ಕ್ಷಮೆ ಇರಲಿ, ಆದರೆ ತರ್ಜುಮೆ ಇಲ್ಲದ ಕಾರಣ ನಾವು ಮತ್ತೊಬ್ಬ ಸ್ಪೀಕರ್ಗೆ ಅವಕಾಶ ಕೊಡೋಣ’ ಎಂದರು. ಅಲ್ಲಿಗೆ ಒಂದೂವರೆ ನಿಮಿಷಗಳ ಕಾಲ ಮಾತನಾಡಬೇಕಿದ್ದ ರಿಷಬ್ ಶೆಟ್ಟಿಯವರ ಕನ್ನಡ ಭಾಷಣ ಕೇವಲ 12 ಸೆಕೆಂಡ್ಗೆ ಮುಕ್ತಾಯವಾಗಿಬಿಟ್ಟಿತು.
You must be logged in to post a comment Login