LATEST NEWS
ಹಿಟ್ ಲಿಸ್ಟ್ ನಲ್ಲಿರುವ ಹಿಂದೂ ಸಂಘಟನೆ ಮುಖಂಡರ ಭದ್ರತೆಗೆ ಪೊಲೀಸರ ನಿರ್ಲಕ್ಷ್ಯ
ಹಿಟ್ ಲಿಸ್ಟ್ ನಲ್ಲಿರುವ ಹಿಂದೂ ಸಂಘಟನೆ ಮುಖಂಡರ ಭದ್ರತೆಗೆ ಪೊಲೀಸರ ನಿರ್ಲಕ್ಷ್ಯ
ಮಂಗಳೂರು ಡಿಸೆಂಬರ್ 16: ಕರಾವಳಿಯಲ್ಲಿ ಕೋಮು ಸಂಘರ್ಷದ ಜ್ವಾಲೆ ಮತ್ತೆ ಭುಗಿಲೇಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ದುಷ್ಕರ್ಮಿಗಳು ಎಣ್ಣಿ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಕರಾವಳಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಸರಣಿ ಹತ್ಯೆಗಳು ನಡೆಯುತ್ತಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೂಡಬಿದ್ರೆಯ ಹಿಂದೂ ಸಂಘಟನೆ ಮುಖಂಡ ಪ್ರಶಾಂತ ಪೂಜಾರಿ ಯಿಂದ ಆರಂಭಗೊಂಡು ಎಸ್ ಡಿಪಿಐ ಮುಖಂಡ ಕಲಾಯಿ ಅಶ್ರಫ್, ಕಾಂಗ್ರೇಸ್ ಮುಖಂಡ ಜಲೀಲ್ ಕಾರೋಪಾಡಿ ಸೇರಿದಂತೆ ಇತ್ತೀಚೆಗೆ ನಡೆದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಕರಾವಳಿಯ ಧಗಧಗಿಸುತ್ತಿರುವ ಕೋಮು ಜ್ವಾಲೆಗೆ ಎಣ್ಣೆ ಸುರಿದಿದ್ದಾರೆ.
ಈ ನಡುವೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ದುಷ್ಕರ್ಮಿಗಳ ಹಿಟ್ ಲಿಸ್ಟ್ ನಲ್ಲಿರುವುದರಿಂದ ತಾವೇ ಗನ್ ಖರೀದಿಸಲು ಮುಂದಾಗಿರುವುದು, ರಾಜ್ಯ ಪೊಲೀಸರ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ. ಸಂಸದೆ ಒಬ್ಬರಿಗೆ ರಾಜ್ಯ ಪೊಲೀಸರ ಭದ್ರತೆಗೆ ಬಗ್ಗೆ ಅನುಮಾನ ಮೂಡಿದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
ಈ ನಡುವೆ ಕರಾವಳಿಯ ಹಿಂದೂ ಹಾಗೂ ಮುಸ್ಲಿಂ ಮುಖಂಡರ ಹತ್ಯೆಗೆ ದುಷ್ಕರ್ಮಿಗಳು ಸ್ಕೆಚ್ ಹಾಕಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ಹಲವಾರು ಪ್ರಮುಖ ಮುಖಂಡರಿಗೆ ಪೊಲೀಸ್ ಇಲಾಖೆ ಗನ್ ಮ್ಯಾನ್ ಭದ್ರತೆ ನೀಡಿದೆ. ಆದರೆ ಟಾಪ್ ಹಿಟ್ ಲಿಸ್ಟ್ ನಲ್ಲಿರುವ ಕೆಲ ಮುಖಂಡರಿಗೆ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ಮೀನಾಮೇಷ ಎಣಿಸುತ್ತಿರುವುದಾದರೂ ಏಕೆ ಎನ್ನುವ ಪ್ರಶ್ನೆ ಮೂಡಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ 14 ಜನರಿಗೆ ಪೊಲಿಸ್ ಗನ್ ಮ್ಯಾನ್ ಭದ್ರತೆ ನೀಡಿದೆ. ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರು , ಹಿಂದೂ ಸಂಘಟನೆಯ ಮುಖಂಡ, ಶಾಸಕ , ಎಂಎಲ್ ಸಿ ಸೇರಿದಂತೆ ವಿಚಾರವಾದಿಗಳಿಗೆ ಪೊಲೀಸ್ ಗನ್ ಮ್ಯಾನ್ ಭದ್ರತೆ ನೀಡಿದೆ. ಒಬ್ಬರಿಗಂತೂ ಇಬ್ಬಿಬ್ಬರು ಗನ್ ಮ್ಯಾನ್ ಭದ್ರತೆ ನೀಡಲಾಗಿದೆ.
ಹಿಟ್ ಲಿಸ್ಟ್ ನಲ್ಲಿದ್ದರೂ ಶರಣ್ ಪಂಪ್ ವೆಲ್ ಗೆ ಭದ್ರತೆ ನಿರಾಕರಣೆ
ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಅವರಿಗೆ ಪೊಲೀಸ್ ಇಲಾಖೆ ಭದ್ರತೆ ನೀಡಿಲ್ಲ. ಗುಪ್ತಚರ ಮಾಹಿತಿಯಂತೆ ಶರಣ್ ಪಂಪ್ ವೆಲ್ ಹಿಟ್ ಲಿಸ್ಟ್ ನಲ್ಲಿರುವುದು ದೃಢಪಟ್ಟಿದೆ. ಆದರೂ ಪೊಲೀಸ್ ಇಲಾಖೆ ಗನ್ ಮ್ಯಾನ್ ಭದ್ರತೆ ನೀಡಿದೆ. ತಮಗೆ ಬೆದರಿಕೆ ಇರುವುದಾಗಿ ಈಗಾಗಲೇ ಶರಣ್ ಪಂಪ್ ವೆಲ್ ಪೊಲೀಸ್ ಇಲಾಖೆಗೆ 2 ಬಾರಿ ಪತ್ರ ಮುಖೇನ ತಿಳಿಸಿದ್ದು, ಗನ್ ಮ್ಯಾನ್ ಭದ್ರತೆ ನೀಡುವಂತೆ ಕೋರಿದ್ದಾರೆ. ಆದರೆ ಪೊಲೀಸ್ ಇಲಾಖೆ ಮಾತ್ರ ಮೀನಾ ಮೇಷ ಎಣಿಸುತ್ತಿದೆ.
ಪೊಲೀಸ್ ಇಲಾಖೆ ಕೆಲವರಿಗೆ ಪ್ರೋಟೋಕಾಲ್ ಪ್ರಕಾರ ಭದ್ರತೆ ನೀಡಿದರೆ ಕೆಲವರಿಗೆ ಉಚಿತ ಗನ್ ಮ್ಯಾನ್ ಭದ್ರತೆ ಒದಗಿಸಿದೆ. ಇನ್ನು ಕೆಲವರಿಗೆ ಇಂತಿಷ್ಟು ಶುಲ್ಕದ ಆಧಾರದ ಮೇಲೆ ಗನ್ ಮ್ಯಾನ್ ಭದ್ರತೆ ನೀಡಿದೆ. ಆದರೆ ಹಿಟ್ ಲಿಸ್ಟ್ ನಲ್ಲಿರುವ ಶರಣ್ ಪಂಪ್ ವೆಲ್ ಗೆ ಗನ್ ಮ್ಯಾನ್ ನೀಡದಿರಲು ಕಾರಣವೇನು ಎನ್ನುವ ಪ್ರಶ್ನೆ ಮೂಡಲಾರಂಭಿಸಿದೆ.
ಈಗಾಗಲೇ ಚುನಾವಣೆ ಹೊಸ್ತಿಲಲ್ಲಿದೆ. ಈ ನಡುವೆ ಮತ್ತೇನಾದರೂ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಹೊಣೆ ಹೊತ್ತುಕೊಳ್ಳುವವರಾರು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ನಡುವೆ ಗನ್ ಪರಾವನಿಗೆಗಾಗಿ ಶರಣ್ ಪಂಪ್ ವೆಲ್ ಮನವಿ ಸಲ್ಲಿಸಿದ್ದು ಅದಕ್ಕೂ ಪೊಲೀಸ್ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ದೂರಲಾಗಿದೆ.
ರಾಜ್ಯ ಪೊಲೀಸರನ್ನು ಬಿಟ್ಟು ತಾವೇ ಗನ್ ಖರೀದಿಸಲು ಮುಂದಾದ ಸಂಸದೆ
ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಯ ಬಗ್ಗೆ ಧ್ವನಿ ಎತ್ತುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಟಾರ್ಗೆಟ್ ಮಾಡಲು ಕೆಲವು ಶಕ್ತಿಗಳು ಸ್ಕೆಚ್ ರೂಪಿಸಿರುವ ಆಂತಕಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ಶೋಭಾ ಕರಂದ್ಲಾಜೆ ಗನ್ ಲೈಸೆನ್ಸ್ ಗ ಅರ್ಜಿ ಸಲ್ಲಿಸಿದ್ದಾರೆ.
ಕರಾವಳಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಘರ್ಷಣೆ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಟಾರ್ಗೇಟ್ ಮಾಡಲು ಸಮಾಜ ಘಾತುಕ ಶಕ್ತಿಗಳು ಯೋಜನೆ ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿತ್ತು. ಈ ವರದಿಯನ್ನು ಆಧರಿಸಿ ಶೋಭಾ ಕರಂದ್ಲಾಜೆ ಗನ್ ಪರಾವನಿಗೆಗಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.
ಈ ನಡುವೆ ಶೋಭಾ ಕರಂದ್ಲಾಜೆ ಆತ್ಮರಕ್ಷಣೆಗಾಗಿ ಗನ್ ಖರೀದಿಗೆ ಮುಂದಾಗಿದ್ದು ಈಗಾಗಲೇ ಇದಕ್ಕೆ ಬೇಕಾಗಿರುವ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.
You must be logged in to post a comment Login