LATEST NEWS
ಮಂಗಳೂರಿನಲ್ಲಿ ಮಳೆ ಅಬ್ಬರ – ಪಂಪ್ ವೆಲ್ ನಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ

ಮಂಗಳೂರು, ಮೇ 25 : ಮಂಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ನಡುವೆ ಎಂದಿನಂತೆ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ನ ಅಡಿಭಾಗದಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಯಲ್ಲೇ ಹರಿದಿದೆ.
ಭಾನುವಾರ ಬೆಳಗ್ಗೆ 11 ಗಂಟೆ ವೇಳೆಗೆ ಸುರಿದ ಭಾರೀ ಗಾಳಿ ಮಳೆಗೆ ಕಾಲುವೆ ತುಂಬಿ ಹರಿದಿದೆ. ಈ ವೇಳೆ, ಫೈಓವರ್ ಕೆಳಭಾಗದಲ್ಲಿ ಕೆಸರು ಬೆರೆತ ಕೆಂಪು ನೀರು ರಸ್ತೆಗೆ ನುಗ್ಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಪಂಪೈಲ್ ಹೆದ್ದಾರಿಯಲ್ಲಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆ ಆಗುತ್ತಿದ್ದು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಟೋ ರಿಕ್ಷಾ, ದ್ವಿಚಕ್ರ ವಾಹನ ಸವಾರರು ಕೆಲಹೊತ್ತು ಶೇಖರಣೆಯಾಗಿದ್ದ ನೀರಿನಲ್ಲೇ ವಾಹನಗಳನ್ನು ತಳ್ಳಿಕೊಂಡು ಸಾಗಿದ್ದಾರೆ.

ಕರಾವಳಿಯಾದ್ಯಂತ ಮಂಗಳೂರು, ಕಾಸರಗೋಡು, ಉಡುಪಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಮುಂಗಾರು ಆಗಮನದಲ್ಲೇ ಅಬ್ಬರ ತೋರಿಸಿದೆ. ಹವಾಮಾನ ಇಲಾಖೆ ಮೇ 28ರ ವರೆಗೂ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಗಾಳಿ ಮಳೆಯ ಮುನ್ಸೂಚನೆ ನೀಡಲಾಗಿದೆ.