Connect with us

LATEST NEWS

ಖ್ಯಾತ ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ನಿಧನ

ಉಡುಪಿ, ಫೆಬ್ರವರಿ 21: ಸಾಹಿತಿ, ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಬಾತನಯ ಮುದ್ರಾಡಿ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಉಡುಪಿ ಜಿಲ್ಲೆಯ ಕಾರ್ಕಾಳ ತಾಲೂಕಿನವರಾಗಿರುವ ಮುದ್ರಾಡಿ ಅವರು ಹತ್ತಾರು ಮೌಲಿಕ ಗ್ರಂಥಗಳನ್ನು ಸಂಪಾದನೆ ಮಾಡಿದ್ದಾರೆ. ಹರಿದಾಸ, ಜಿನದಾಸ, ಏಸು ದಾಸ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಧಾರಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಫು ಮೂಡಿಸಿದ್ದರು. ಹಲವು ಯಕ್ಷಗಾನ ಪ್ರಸಂಗಗಳ ಕರ್ತೃ ಆಗಿರುವ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಕಳೆದ ವಾರ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡದ್ದು ಅವರ ಕೊನೆಯ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ‘ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ’ ಪುಸ್ತಕವನ್ನು ಪ್ರಕಟಿಸಲಾಗಿತ್ತು.

ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಅವರಿಗೆ ಅರ್ಹವಾಗಿ ಪ್ರಾಪ್ತಿಯಾಗಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ. ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.

ಬಡತನದ ಕಾರಣಕ್ಕೆ ಎಂಟನೇ ತರಗತಿಗೆ ಶಿಕ್ಷಣಕ್ಕೆ ವಿದಾಯ ಹೇಳಿದ್ದರು. ಅವರು ಬರೆದ ‘ಪರಿತ್ಯಕ್ತ ‘ ನಾಟಕವು ಪದವಿ ತರಗತಿಗೆ ಪಠ್ಯ ಪುಸ್ತಕ ಆಗಿತ್ತು. ಭುವನ ಭಾಗ್ಯ ಯಕ್ಷಗಾನ ಪ್ರಸಂಗದಲ್ಲಿ ಅವರು ಮಾಡಿದ ಏಸು ಕ್ರಿಸ್ತನ ಪಾತ್ರವನ್ನು ಕಂಡು ಪ್ರೇಕ್ಷಕರು ಕಣ್ಣೀರಾಗುತ್ತಿದ್ದರು.

Advertisement
Click to comment

You must be logged in to post a comment Login

Leave a Reply