Connect with us

    DAKSHINA KANNADA

    ಖ್ಯಾತ ನಾಟಕಕಾರ ಗಿರೀಶ್ ಪಿಲಾರ್ ನಿಧನ

    ಉಳ್ಳಾಲ, ಜುಲೈ 19: ಖ್ಯಾತ ನಾಟಕಕಾರ, ನಟ ಪಂಡಿತ್‍ ಹೌಸ್ ಪಿಲಾರು ನಿವಾಸಿ ಗಿರೀಶ್ ಪಿಲಾರ್ (60) ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    `ದೇವೆರೆ ತೀರ್ಪು’, `ಆರ್ ಅತ್ ಈರ್’, `ಕೈಕೊರ್ಪೆರ್’, `ಬಲಿಪಡೆ ಉಂತುಲೆ’, `ಎಂಕುಲತ್ ನಿಕುಲು’ , `ಎಂಕುಲ್ ಎನ್ನಿಲೆಕ ಅತ್’,ಆರ್ ಅತ್ ಈರ್, `ಡಿಸೆಂಬರ್ -1′ ಸೇರಿದಂತೆ 20ಕ್ಕೂ ಅಧಿಕ ತುಳು ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು. ಇವರು ಬರೆದು ನಿರ್ದೇಶಿಸಿದ ದೇವೆರೆ ತೀರ್ಪು ನಾಟಕಕ್ಕೆ ಜಿಲ್ಲಾಮಟ್ಟದ ಪ್ರಶಸ್ತಿ ಲಭಿಸಿತ್ತು. ಮಂಗಳೂರಿನ ಪುರಭವನದಲ್ಲಿ ಹಲವು ಬಾರಿ ಪ್ರದರ್ಶನಗೊಂಡಿತ್ತು.

    `ಕೈಕೊರ್ಪೆರ್’ ನಾಟಕ ಬೆಳ್ತಂಗಡಿಯ ಪೂಂಜಾಲಕಟ್ಟೆಯಲ್ಲಿ ಯಶಸ್ವಿ ಪ್ರದರ್ಶನ ಕಂಡು ಪ್ರಶಸ್ತಿಯನ್ನು ಪಡೆದುಕೊಂಡಿತ್ತು. `ಬಲಿಪಡೆ ಉಂತುಲೆ’ 40 ಪ್ರದರ್ಶನಗಳನ್ನು ಕಂಡಿತ್ತು. ಶರವು ಕಲಾವಿದರು ನಟಿಸಿದ ನವನೀತ್ ಶೆಟ್ಟಿ ಕದ್ರಿ ರಚಿಸಿದ ಕಾರ್ನಿಕದ ಶನೀಶ್ವೆರೆ ನಾಟಕವನ್ನು ಗಿರೀಶ್ ಪಿಲಾರ್ ನಿರ್ದೇಶಿಸಿ ಯಶಸ್ವಿ 30 ಪ್ರದರ್ಶನವಾಗಿತ್ತು.

    ದಿನೇಶ್ ಕಂಕನಾಡಿ ಇವರ ನಾಟಕ ` ಮಾಷ್ಟ್ರ್ ದಾನೆ ಮನಿಪುಜೆರ್’ ನಾಟಕದಲ್ಲಿ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು. ಹಲವು ನಾಟಕಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಕಿರುತೆರೆಯಲ್ಲಿ ನಟಿಸಿದ್ದ ಗಿರೀಶ್ ಇವರು ನಟಿಸಿದ್ದ ಪುಂಡಿ ಪಣವು ಧಾರವಾಹಿ ದೂರದರ್ಶನ ಸೇರಿದಂತೆ ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾಗುತಿತ್ತು. ‌

    ಶಿವಪ್ರಕಾಶ್ ಪೂಂಜ, ಪ್ರದೀಪ್ ಆಳ್ವ ಕದ್ರಿ, ದಿ. ಮನಮೋಹನ್ ಕದ್ರಿ ಹಾಗೂ ಗಿರೀಶ್ ಪಿಲಾರ್ ಪ್ರಕೃತಿ ಕಲಾವಿದರು ಕುಡ್ಲ ಇದರ ಸ್ಥಾಪಕರಾಗಿದ್ದರು. ಮೂಲತ: ಬೆಳ್ತಂಗಡಿ ಪೂಂಜಾಲಕಟ್ಟೆಯವರಾಗಿದ್ದ ಇವರು ಪದವಿ ನಂತರ ಪಿಲಾರು ಬಳಿ ವಾಸವಾಗಿದ್ದರು. ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟ್ ಸದಸ್ಯರೂ ಆಗಿದ್ದರು. ಜಾಗೃತ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಹಲವು ವರ್ಷಗಳಿಂದ ಪಿಗ್ಮಿ ಸಂಗ್ರಹಕಾರ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply