LATEST NEWS
ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ ಸಾಧ್ಯತೆ- ರೆಡ್ ಅಲರ್ಟ್ ಘೋಷಣೆ
ಉಡುಪಿ ಅಗಸ್ಟ್ 5: ಉಡುಪಿ ಜಿಲ್ಲೆಯಲ್ಲಿ ಅಗಸ್ಟ್ 6,9 ಹಾಗೂ 10 ಭಾರಿ ಮಳೆಯಾಗುವ ಸಾದ್ಯತೆ ಇದ್ದು ವಿಪತ್ತು ನಿರ್ವಹಣಾ ಪ್ರಾಧಿಕಾರ ರೆಡ್ ಅಲರ್ಟ್ ಘೋಷಿಸಿದೆ. ಈಗಾಗಲೇ ಕಳೆದ ಮೂರು ನಾಲ್ಕು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 6, 9 ಹಾಗೂ 10ರಂದು ರೆಡ್ ಅಲರ್ಟ್ ಹಾಗೂ 7 ಹಾಗೂ 8 ರಂದು ಆರೆಂಜ್ ಅಲರ್ಟ್ ನ್ನು ವಿಪತ್ತು ನಿರ್ವಹಣಾ ಪ್ರಾಧಿಕಾರ ಘೋಷಿಸಿದೆ.
ಈಗಾಗಲೇ ಸುರಿದಿರುವ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ವಾರಾಹಿ ನದಿ ಈಗಾಗಲೇ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಬರುವ ವಾರಾಹಿ ಅಣೆಕಟ್ಟು 98 ಶೇಕಡ ಭರ್ತಿಯಾಗಿದೆ. ಇದೇ ರೀತಿ ನೀರಿನ ಒಳ ಹರಿವು ಮುಂದುವರೆದರೆ ಅಣೆಕಟ್ಟಿಗೆ ಅಪಾಯವಾಗುವ ಸಾಧ್ಯತೆ ಇದ್ದು ,ಕರ್ನಾಟಕ ವಿದ್ಯುತ್ ನಿಗಮ ಆಣೆಕಟ್ಟಿನಿಂದ ನೀರು ಬಿಡಲು ಮುಂದಾಗಿದೆ. 563.88 ಮೀಟರ್ ನೀರಿನ ಸಂಗ್ರಹ ಸಾಮರ್ಥ್ಯದ ವಾರಾಹಿ ಅಣೆಕಟ್ಟಿನಲ್ಲಿ 563.6 ಮೀಟರ್ ನಷ್ಟು ಭರ್ತಿಯಾಗಿದ್ದು, ಅಣೆಕಟ್ಟು ನೀರನ್ನು ಯಾವುದೇ ಸಂದರ್ಭದಲ್ಲಿ ಹೊರಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಹಿನ್ನಲೆ ಆಣೆಕಟ್ಟಿನ ಕೆಳದಂಡೆ ಮತ್ತು ವಾರಾಹಿ ನದಿ ಪಾತ್ರದಲ್ಲಿರುವ ಜನರಿಗೆ ಈಗಾಗಲೇ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಅಣೆಕಟ್ಟಿನಿಂದ ನೀರು ಬಿಟ್ಟರೆ ಹಾಲಾಡಿ ನದಿ ಪಾತ್ರದಲ್ಲಿ ಕೃತಕ ನೆರೆಯಾಗುವ ಸಾಧ್ಯತೆ, ಇದ್ದು ಜನ-ಜಾನುವಾರುಗಳ ಜೊತೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಸೂಚನೆ ನೀಡಲಾಗಿದೆ.