KARNATAKA
“ಬಹಿರಂಗ ಚರ್ಚೆಗೆ ಸಿದ್ಧ”ಎಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ..!
ಬೆಂಗಳೂರು: ರೈತರ ಭೂಮಿಗೆ ಸರಿಯಾದ ಹಣ ನಿಗದಿ ಮಾಡದ ವಿಚಾರವಾಗಿ ಚರ್ಚೆ ಮಾಡಲು ನಾನೂ ಸಿದ್ಧನಿದ್ದೇನೆ.ನವೆಂಬರ್ 1ರ ನಂತರ ಯಾವಾಗ ಬೇಕಿದ್ದರೂ ದಿನಾಂಕ ನಿಗದಿ ಮಾಡಲಿ, ಯಾವುದೇ ಚಾನೆಲ್‌ನಲ್ಲಿ ಬೇಕಿದ್ದರೂ ಸ್ಲಾಟ್ ಫಿಕ್ಸ್ ಮಾಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ. ಅವನು ಕೊಟ್ಟ ಬಹಿರಂಗ ಆಹ್ವಾನವನ್ನು ಸ್ವೀಕಾರ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಏಕವಚನದಲ್ಲಿಯೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದು ಸವಾಲನ್ನು ಸ್ವೀಕರಿಸಿ ಎಂದು ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಾನೇನು ಮಾಡಿದ್ದೇನೆ? ಅವನು ಏನು ಮಾಡಿದ್ದಾನೆ? ಎಲ್ಲವನ್ನೂ ಬಿಚ್ಚಿ ಇಡ್ತೇನೆ. ಟೈಮ್ ಫಿಕ್ಸ್ ಮಾಡಿ. ನವೆಂಬರ್ 1ರ ನಂತರ ಚರ್ಚೆ ನಡೆಸಲು ದಿನಾಂಕವನ್ನು ನಿಗದಿ ಮಾಡಲಿ ಎಂದು ಪ್ರತಿ ಸವಾಲು ಹಾಕಿದ್ದಾರೆ.ಡಿ.ಕೆ. ಶಿವಕುಮಾರ್ ಪಟಾಲಮ್‌ನಿಂದ ರೈತರ ಪರಿಹಾರದಲ್ಲಿ ಲೂಟಿ ಎಂಬ ಎಚ್.ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನೋಡ್ರಿ ನಾನು ಏನು ಮಾಡಿದ್ದೇನೆ, ಅವರು ಏನು ಮಾಡಿದ್ದಾರೆ ಅನ್ನೋದನ್ನು ಬಿಚ್ಚಿ ಮಾತಾಡೋಣ. ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಸಮಯ ಫಿಕ್ಸ್ ಮಾಡಿ ಅಲ್ಲಿ ಬಂದು ಎಲ್ಲವನ್ನೂ ಮಾತಾಡೋಣ ಎಂದು ಹೇಳಿ ಹೊರಟರು.
ಎಚ್‌ಡಿಕೆ ಸವಾಲು ಏನು?
ನಾನಾಗಲೀ ನನ್ನ ಕುಟುಂಬದವರಾಗಲೀ ಅಧಿಕಾರದಲ್ಲಿದ್ದಾಗ ಪೊಲೀಸ್ ವರ್ಗಾವಣೆ ಸೇರಿದಂತೆ ಇನ್ನು ಯಾವುದೇ ವರ್ಗಾವಣೆಗೆ ದುಡ್ಡು (Transfer racket) ತೆಗೆದುಕೊಂಡಿಲ್ಲ. ಈ ಬಗ್ಗೆ ಮಾಗಡಿ ಬಾಲಕೃಷ್ಣ (Magadi Balakrishna) ಹಾಕಿರುವ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ನಾನೂ ಧರ್ಮಸ್ಥಳಕ್ಕೆ ಬರುತ್ತೇನೆ. ಅವರೂ ಧರ್ಮಸ್ಥಳಕ್ಕೆ ಬರಲಿ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಸೇರಿದಂತೆ 30 ಸಚಿವರೂ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ.ಸಿಎಂ, ಡಿಸಿಎಂ ಹಾಗೂ 30 ಸಚಿವರು ವರ್ಗಾವಣೆಯಲ್ಲಿ ದುಡ್ಡು ಮುಟ್ಟೇ ಇಲ್ಲ ಎಂದು ಪ್ರಮಾಣವನ್ನು ಮಾಡಲಿ. ಈ ಹಿಂದಿನ ಕಥೆಯಲ್ಲ ಬೇಡ. ಈಗ ಸರ್ಕಾರ ಬಂದು ಆರು ತಿಂಗಳ ಅವಧಿಯಲ್ಲಿ ನಡೆದ ವರ್ಗಾವಣೆಗೆ ಸಂಬಂಧಪಟ್ಟಂತೆ ಮಾತ್ರವೇ ಪ್ರಮಾಣ ಮಾಡಿದರೂ ಸಾಕು ಎಂದು ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಸವಾಲು ಹಾಕಿದ್ದರು.
.