Connect with us

    LATEST NEWS

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4.51 ಲಕ್ಷ ಪಡಿತರ ಚೀಟಿಗಳು

    ಮಂಗಳೂರು, ಫೆಬ್ರವರಿ 1: ಸಾರ್ವಜನಿಕ ವಿತರಣಾ ಪದ್ಧತಿಯಡಿ ಸರಕಾರದಿಂದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತೀ ತಿಂಗಳು ವಿತರಿಸಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಸಿವು ಮುಕ್ತ ಕರ್ನಾಟಕದ ಪರಿಕಲ್ಪನೆಯೊಂದಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತೀ ತಿಂಗಳು ಅರ್ಹ ಫಲಾನುಭವಿಗಳಿಗೆ ಪಡಿತರ ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 460 ನ್ಯಾಯಬೆಲೆ ಅಂಗಡಿಗಳಿದ್ದು ಒಟ್ಟು 451593 ಪಡಿತರ ಚೀಟಿಗಳಿವೆ.


    ಅಂತ್ಯೋದಯ ಅನ್ನಯೋಜನೆಯಡಿ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಒಟ್ಟು 23011 ಕುಟುಂಬಗಳು ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಯೋಜನೆಯಡಿ 114432 ಅಂತ್ಯೋದಯ ಫಲಾನುಭವಿಗಳು ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ. ಇವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತೀ ತಿಂಗಳು ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಆರ್ಥಿಕವಾಗಿ ಬಡತನದ ರೇಖೆಗಿಂತ ಕೆಳಮಟ್ಟದಲ್ಲಿರುವ ಒಟ್ಟು 254851 ಕುಟುಂಬಗಳಿದ್ದು ಅವುಗಳಿಗೆ ಆದ್ಯತಾ ಪಡಿತರ ಚೀಟಿಗಳನ್ನು ನೀಡಲಾಗಿದೆ. ಇವುಗಳಲ್ಲಿ ಒಟ್ಟು 10,16,210 ಫಲಾನುಭವಿಗಳಿದ್ದು, ಪ್ರತೀ ಫಲಾನುಭವಿಗೆ ಮಾಸಿಕ 5ಕೆ.ಜಿ ಯಂತೆ ಉಚಿತವಾಗಿ  ಅಕ್ಕಿಯನ್ನು ನೀಡಲಾಗುತ್ತಿದೆ.

    ಬಡತನ ರೇಖೆಗಿಂತ ಮೇಲಿನ(ಎಪಿಎಲ್) 173731 ಕುಟುಂಬಗಳು ಆದ್ಯತೇತರ ಪಡಿತರ ಚೀಟಿಗಳನ್ನು ಪಡೆದಿರುತ್ತಾರೆ. ಇವುಗಳಲ್ಲಿ ಪಡಿತರ ಪಡೆಯಲು ಇಚ್ಛೆ ವ್ಯಕ್ತಪಡಿಸಿರುವ ಒಟ್ಟು 110512 ಪಡಿತರ ಚೀಟಿಗಳಲ್ಲಿ ಏಕ ಸದಸ್ಯ ಪಡಿತರ ಚೀಟಿಗಳಿಗೆ 5ಕೆ.ಜಿ. ಹಾಗೂ ಬಹುಸದಸ್ಯ ಪಡಿತರ ಚೀಟಿಗಳಿಗೆ 10ಕೆ.ಜಿಯಂತೆ, ಕೆ.ಜಿ.ಯೊಂದಕ್ಕೆ ರೂ.15 ರ ದರದಲ್ಲಿ ಪಡಿತರ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ಅಡಿಯಲ್ಲಿ ರಾಜ್ಯದೊಳಗಿನ ಹಾಗೂ ಅನ್ಯ ರಾಜ್ಯಗಳ ಯಾವುದೇ ಪಡಿತರ ಚೀಟಿದಾರರಿಗೆ ಪಡಿತರವನ್ನು ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡೆದುಕೊಳ್ಳಬಹುದಾಗಿರುತ್ತದೆ.

    ರಾಜ್ಯ ಸರಕಾರವು ಜುಲೈ-2023ರಿಂದ ರಾಜ್ಯ ಸರಕಾರದಿಂದ ಅಂತ್ಯೋದಯ ಪಡಿತರ ಚೀಟಿಯಲ್ಲಿ 4 ಹಾಗೂ ಅದಕ್ಕಿಂತ ಹೆಚ್ಚಿನ ಸದಸ್ಯರಿದ್ದಲ್ಲಿ ಹಾಗೂ ಮೂರು ಆದ್ಯತಾ ಪಡಿತರ ಚೀಟಿಯ ಪ್ರತೀ ಸದಸ್ಯನಿಗೆ ನೀಡುವ 5 ಕೆ.ಜಿ ಅಕ್ಕಿ ಬದಲಾಗಿ ರೂ.170 ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಪಡಿತರ ಚೀಟಿ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದರಂತೆ ಡಿಸೆಂಬರ್ 2023ನೇ ತಿಂಗಳಿನಲ್ಲಿ 253658 ಆದ್ಯತಾ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರಿಗೆ ರೂ. 17.68 ಕೋಟಿಗಳನ್ನು ನೇರವಾಗಿ ನಗದು ಜಮೆ ಮಾಡಲಾಗಿದೆ.

    ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಸೇರಿದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಒಟ್ಟು 168 ಹಾಸ್ಟೆಲ್ ಗಳಲ್ಲಿರುವ 15,143 ನಿವಾಸಿಗಳಿಗೆ ಪ್ರತೀ ನಿವಾಸಿಗೆ 10 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಗೋಧಿಯನ್ನು ಪ್ರತೀ ತಿಂಗಳು ಆಹಾರ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಟಣೆ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply