DAKSHINA KANNADA
ಕಡಬ – ಅಜ್ಜನಿಗೆ ಕುಡಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ….!!

ಕಡಬ ಅಕ್ಟೋಬರ್ 06: ರಬ್ಬರ್ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ ಘಟನೆ ನೂಜಿಬಾಳ್ತಿಲ ಗ್ರಾಮದಲ್ಲಿ ನಡೆದಿದ್ದು, ದೂರಿನ ಹಿನ್ನಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಸುನಿಲ್ ಎಂದು ಗುರುತಿಸಲಾಗಿದೆ.
ಈತ ನೂಜಿಬಾಳ್ತಿಲದ ಖಾಸಗಿ ಶಾಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿಯನ್ನು ಬಲತ್ಕಾರವಾಗಿ ಅತ್ಯಾಚಾರಗೈದಿರುವ ಬಗ್ಗೆ ಬಾಲಕಿಯ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಕಡಬ ಪೋಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಬಾಲಕಿಯ ಮನೆಯ ಪಕ್ಕದಲ್ಲಿ ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಕೆಲಸಕ್ಕೆ ಆರೋಪಿ ಬರುತ್ತಿದ್ದನಂತೆ. ಬಾಲಕಿಯ ಅಜ್ಜನ ಜೊತೆ ಮಾತನಾಡುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದು, ಆರೋಪಿಯು ಬಾಲಕಿಯ ಮನೆಗೆ ಬಂದು ಬಾಲಕಿಯ ಅಜ್ಜನಿಗೆ ಮದ್ಯಪಾನ ಮಾಡಿಸಿ ಬಾಲಕಿಯನ್ನು ಬಲವಂತವಾಗಿ ರೂಮಿಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ.
ಅಲ್ಲದೆ ಬಳಿಕ ಸೆಪ್ಟೆಂಬರ್ 26ರಂದು ಮನೆಯಲ್ಲಿ ಬಾಲಕಿಯ ತಾತ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮತ್ತೊಮ್ಮೆ ಮನೆಗ ಬಂದು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕ್ರಮ ಕೈಗೊಂಡಿರುವ ಕಡಬ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.