ಬೆಳ್ತಂಗಡಿ ಜುಲೈ 17: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಧೇಯ ವ್ಯಕ್ತಿ ನೀಡಿದ ದೂರಿನ ಪ್ರಕರಣ ಇದೀಗ ಪೊಲೀಸ್ ಮತ್ತು ವಕೀಲರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಸಮಾಧಿ ಅಗೆಯುವ ಕಾರ್ಯ ಮುಗಿಯುತ್ತಿದ್ದಂತೆ ದೂರುದಾರ ನಾಪತ್ತೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ದೂರುದಾರ ಸಾಕ್ಷಿಗೆ ರಕ್ಷಣೆ ನೀಡುವುದಾಗಿ ಹೇಳಿದ ಕೆಲವು ದಿನಗಳ ನಂತರ, ಪೊಲೀಸರು ಆತ ಎಲ್ಲಿದ್ದಾನೆ ಗೊತ್ತಿಲ್ಲ ಎಂದು ಹೇಳಿದ್ದು ಈ ಹೇಳಿಕೆಯನ್ನು ಅವರ ವಕೀಲರು ತೀವ್ರವಾಗಿ ಪ್ರಶ್ನಿಸಿದ್ದಾರೆ.

‘ಸಾಕ್ಷಿದಾರರ ರಕ್ಷಣೆಗೆ ಸಂಬಂಧಿಸಿದ ನಿಯಮ 7ರ ಅಡಿಯಲ್ಲಿ ಸಾಕ್ಷಿದಾರನ ಒಪ್ಪಿಗೆ ಮತ್ತು ಸಹಕಾರವಿದ್ದಲ್ಲಿ ಮಾತ್ರ ತೆಗೆದುಕೊಳ್ಳಬಹುದಾದ ಹಲವು ಕ್ರಮಗಳಿವೆ. ಈ ಬಗ್ಗೆ ಜುಲೈ 10ರಂದು ಸಾಕ್ಷಿದಾರನ ಪರವಾದ ವಕೀಲರಿಗೆ ಇಮೇಲ್ ಮೂಲಕ ತಿಳಿಸಲಾಗಿದೆ. ಆದರೆ ಈವರೆಗೆ ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಅವರು ಪೊಲೀಸರೊಂದಿಗೆ ಹಂಚಿಕೊಂಡಿಲ್ಲ. ಪ್ರಕರಣದ ಬಗ್ಗೆ ವಕೀಲರೊಂದಿಗೆ ಎಲ್ಲಾ ಸಂವಹನಗಳು ಇಮೇಲ್ ಮೂಲಕ ಮಾತ್ರ ನಡೆಯುತ್ತಿವೆ. ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲದಿದ್ದಾಗ, ಅಂತಹ ಸಾಕ್ಷಿದಾರನಿಗೆ ಸಾಕ್ಷಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಡಿವೈಎಸ್ಪಿಯವರು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸುತ್ತಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಈ ಪ್ರಕರಣದ ತನಿಖೆಯ ಮುಂದಿನ ಹಂತಗಳಲ್ಲೂ ಸಾಕ್ಷಿದಾರನು ಲಭ್ಯವಿಲ್ಲದಿದ್ದರೆ, ಅವರ ಬಗ್ಗೆ ಪರಿಶೀಲಿಸಲು ಪೊಲೀಸರಿಗೆ ಯಾವುದೇ ಮಾಹಿತಿಗಳು ಇರುವುದಿಲ್ಲ’ ಎಂದು ತಿಳಿಸಿದ್ದಾರೆ.
‘ಸಾಕ್ಷಿಯ ಗುರುತು ರಕ್ಷಣೆಗಾಗಿ ಮನವಿ ಸಲ್ಲಿಕೆಯಾದ ಸಂದರ್ಭದಲ್ಲಿ, ಸಾಕ್ಷಿದಾರ ವ್ಯಕ್ತಿಯ ಪರವಾದ ವಕೀಲರು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಹಾಗೂ ಇತರ ಸಂವಹನ ನಡೆಸುವಾಗ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಈ ಬಗ್ಗೆ ವಕೀಲರನ್ನು ವಿಚಾರಣೆ ನಡೆಸಲಾಗಿದೆ. ಸಾಕ್ಷಿ ದೂರುದಾರರ ಕೋರಿಕೆಯ ಮೇರೆಗೆ ಈ ಮಾಹಿತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ವಕೀಲರು ಉತ್ತರ ಕಳುಹಿಸಿದ್ದಾರೆ. ಆದರೆ, ಈ ಪತ್ರಿಕಾ ಪ್ರಕಟಣೆ ಹಾಗೂ ಇತರ ಸಂವಹನಗಳ ಮೂಲಕ ನೀಡಿರುವ ಮಾಹಿತಿಗಳಿಂದಾಗಿ ಸಾಕ್ಷಿ ಗುರುತಿನ ರಕ್ಷಣೆ ಸಾಧ್ಯವಾಗಿಲ್ಲ. ಈ ಅರ್ಜಿಯ ಹೆಚ್ಚಿನ ವಿಚಾರಣೆಯು ಬಾಕಿ ಇದೆ’ ಎಂದು ಅವರು ತಿಳಿಸಿದ್ದಾರೆ.
ದೂರುದಾರನ ಪರ ವಕೀಲರು ಎಫ್ಐಆರ್ ಮತ್ತು ದೂರಿನ ಪ್ರತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರ ಬಗ್ಗೆಯೂ ಪೊಲೀಸರು ಕಳವಳ ವ್ಯಕ್ತಪಡಿಸಿದರು. ಇದರಿಂದಾಗಿ ಸಾಕ್ಷಿಯ ಗುರುತನ್ನು ರಕ್ಷಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ದೂರುದಾರನ ಕೋರಿಕೆಯ ಮೇರೆಗೆ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ವಕೀಲರು ತಿಳಿಸಿರುವುದಾಗಿ ವರದಿಯಾಗಿದೆ.
ಪೊಲೀಸ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ದೂರುದಾರನ ಪರ ವಕೀಲರಾದ ಧೀರಜ್ ಎಸ್ಜೆ ಮತ್ತು ಅನನ್ಯಾ ಗೌಡ, ಕಾನೂನು ತಂಡವು ಹೇಳಿಕೆಗೆ ಪ್ರತಿಯಾಗಿ ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಿತು. ಪೊಲೀಸ್ ವರಿಷ್ಠಾಧಿಕಾರಿಯ ಸಾರ್ವಜನಿಕ ಹೇಳಿಕೆಗಳಿಂದ ಆಶ್ಚರ್ಯಚಕಿತರಾಗಿದ್ದಾಗಿ ವಕೀಲರು ಹೇಳಿದರು. ದೂರುದಾರ ಆರಂಭದಲ್ಲಿ ಪೊಲೀಸರನ್ನು ಸಂಪರ್ಕಿಸಲಿಲ್ಲ. ಆದರೆ ಧರ್ಮಸ್ಥಳದಲ್ಲಿ ನಡೆದಿದ್ದ ಘಟನೆಗಳ ನೈತಿಕ ಬಾಧ್ಯತೆ ಮತ್ತು ಘೋರ ಅನ್ಯಾಯವೆಂದು ನಂಬಿದ್ದರಿಂದಾಗಿ ದೂರದಾರ ಅದನ್ನು ಸರಿಪಡಿಸುವ ಬಯಕೆಯಿಂದ ಮಾತ್ರ ಮುಂದೆ ಬಂದಿದ್ದಾಗಿ ವಕೀಲರು ಹೇಳಿದರು. ದೂರಿನ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ತನ್ನ ವಕೀಲರಿಗೆ ಸೂಚಿಸುವ ದೂರುದಾರನ ಆಯ್ಕೆಯು ಜಾಗೃತಿ ಮೂಡಿಸುವ ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕ ಕ್ರಿಯೆಯಾಗಿದೆ. ಭದ್ರತೆಯನ್ನು ರಾಜಿ ಮಾಡಿಕೊಳ್ಳಲು ಅಲ್ಲ ಎಂದು ವಕೀಲರು ಒತ್ತಿ ಹೇಳಿದರು.
‘ನಾವು ಈಗ ಆತನ ಜೊತೆಗೆ ಇದ್ದು, ನಮ್ಮ ಸಹೋದ್ಯೋಗಿಗಳಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರಿಂದ ಹೊಣೆ ವಹಿಸಿಕೊಂಡಿದ್ದೇವೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ದೂರುದಾರ ವ್ಯಕ್ತಿ ಮೊದಲು ಪೊಲೀಸರನ್ನಾಗಲೀ ಅಥವಾ ಜಿಲ್ಲಾ ಪೊಲೀಸ್ ವರಿಷ್ಠರನ್ನಾಗಲೀ ಏಕೆ ಸಂಪರ್ಕಿಸಿಲ್ಲ ಎಂದರೆ, ಇಲ್ಲಿ ಯಾವುದೇ ಪ್ರಕರಣದ ತನಿಖೆ ಬಾಕಿ ಇರಲಿಲ್ಲ ಅಥವಾ ಮೃತಪಟ್ಟ ವ್ಯಕ್ತಿಗಳ ಅವಶೇಷಗಳಿಗಾಗಿ ಯಾರೂ ಹುಡುಕುತ್ತಿರಲಿಲ್ಲ. ದೇವರ ಮೇಲಿನ ಭಯ ಹಾಗೂ ಆತ್ಮಸಾಕ್ಷಿಯ ಕಾರಣಕ್ಕೆ ದೂರುದಾರ ತಪ್ಪೆಪ್ಪಿಕೊಳ್ಳುವ ಹಾಗೂ ಮಾರ್ಗದರ್ಶನ ಬಯಸುವ ಉದ್ದೇಶದಿಂದ ವಕೀಲರನ್ನು ಸಂಪರ್ಕಿಸಿದ್ದ. ಇತಿಹಾಸದಲ್ಲಿ ನಡೆದ ಘೋರ ಪ್ರಮಾದಗಳಿಗೆ ಅಂತ್ಯ ಹಾಡುವುದು ಆತನ ಉದ್ದೇಶವಾಗಿತ್ತು. ಈ ಘನ ಉದ್ದೇಶವನ್ನೇ ಪೊಲೀಸರು ಸತತ ನಿರ್ಲಕ್ಷ್ಯ ಮಾಡಿರುವುದು ಅವರ ಹೇಳಿಕೆಯಲ್ಲಿ ಕಂಡು ಬಂದಿದೆ’.
‘ದೂರು ನೀಡಿದ ವ್ಯಕ್ತಿಯು ಪರಿಶೀಲನೆಗೆ ಒಳಪಡುವುದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಗುರುತು ಬಹಿರಂಗಪಡಿಸಬಾರದು ಎಂದು ಬಯಸುತ್ತಿಲ್ಲ. ಅದರ ಬದಲು, ಸ್ವತಃ ಮುಂದೆ ಬಂದು ಪರಿಷ್ಕೃತ ದೂರನ್ನು ನೀಡುವಂತೆ ತನ್ನ ವಕೀಲರಿಗೆ ಆತ ಸೂಚಿಸಿದ್ದು, ಎಫ್ಐಆರ್ ದಾಖಲಿಸಿದ್ದೆಲ್ಲವನ್ನೂ ಆತ ಪ್ರಜ್ಞಾಪೂರ್ವಕವಾಗಿಯೇ ಮಾಡಿದ್ದಾನೆ. ಈ ಹಂತದಲ್ಲಿ ಪೊಲೀಸರು ಆತನಿಗೆ ರಕ್ಷಣೆ ಒದಗಿಸಬೇಕಾದ ಕರ್ತವ್ಯದಿಂದ ಹಿಂದೆ ಸರಿಯುವುದು ತಪ್ಪು. ಪರಿಷ್ಕೃತ ದೂರನ್ನು ನೀಡುವಂತೆ ಅರ್ಜಿದಾರ ವ್ಯಕ್ತಿ ತನ್ನ ವಕೀಲರಿಗೆ ನಿರ್ದಿಷ್ಟ ಸೂಚನೆಯನ್ನೇನಾದರೂ ನೀಡಿದ್ದಾರೆಯೇ ಎಂದು ತನಿಖಾಧಿಕಾರಿ ತಿಳಿದುಕೊಳ್ಳಲು ಪ್ರಯತ್ನಿಸುವ ಮೂಲಕ ವಕೀಲರು ಮತ್ತು ಕಕ್ಷಿದಾರರ ಹಕ್ಕುಗಳಿಗೆ ಚ್ಯುತಿಯನ್ನು ಉಂಟು ಮಾಡುವುದು ತೀವ್ರ ಆಕ್ಷೇಪಾರ್ಹ’ ಎಂದು ಅವರು ಹೇಳಿದ್ದಾರೆ.
‘ಸಾಕ್ಷಿದಾರ ವ್ಯಕ್ತಿ ಹೇಳಿದ ಜಾಗದ ಬಗ್ಗೆ ತಿಳಿದಿಲ್ಲ ಹಾಗೂ ಅದು ಸುಳ್ಳು ಎಂದು ಎದ್ದುಕಾಣುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಜುಲೈ 14ರಂದು ಆತ ಹೇಳಿದ ಜಾಗದಲ್ಲೇ ಪೊಲೀಸರು ಸುಮಾರು ನಾಲ್ಕು ಗಂಟೆ ಆತನ ಜೊತೆಗಿದ್ದು ಹೇಳಿಕೆಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಜುಲೈ 13ರಂದು ಆತನ ತಾತ್ಕಾಲಿಕ ವಿಳಾಸವನ್ನು ಪೊಲೀಸರ ಜೊತೆಗೆ ಇಮೇಲ್ ಮೂಲಕ ಔಪಚಾರಿಕವಾಗಿಯೇ ಹಂಚಿಕೊಂಡಿದ್ದೆವು. ಆತ ಎಲ್ಲಿದ್ದಾನೋ ಗೊತ್ತಾಗಿಲ್ಲ, ಆತ ಲಭ್ಯವಿಲ್ಲ ಎಂಬ ಹೇಳಿಕೆಗಳು ಪೊಲೀಸರ ಕಡೆಯಿಂದ ಆಗಿರುವ ಲೋಪಗಳು. ಜುಲೈ 11ರಂದು ರಾತ್ರಿ ಮ್ಯಾಜಿಸ್ಟ್ರೇಟ್ ಎದುರು ನೀಡಿದ ಪ್ರಮಾಣೀಕೃತ ಹೇಳಿಕೆಯಲ್ಲಿ ನಿರ್ದಿಷ್ಟ ಹೆಸರುಗಳನ್ನು ಬಹಿರಂಗಪಡಿಸಿದ್ದೇನೆ ಎಂದು ದೂರುದಾರ ವ್ಯಕ್ತಿ ನಮಗೆ ತಿಳಿಸಿದ್ದಾನೆ. ತನ್ನ ಜೀವಕ್ಕೆ ಬೆದರಿಕೆ ಇದೆ ಎಂಬುದಾಗಿ ಆತ ತೀವ್ರ ಆತಂಕ ತೋಡಿಕೊಂಡಿದ್ದಾನೆ.
‘ಜುಲೈ 11ರಂದು (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 183ರಡಿ) ನೀಡಿರುವ 164 ಹೇಳಿಕೆಯ ಭಾಗವಾಗಿ ತಾನು ನಿರ್ದಿಷ್ಟ ಜಾಗದಿಂದ ಅಗೆದು ತೆಗೆದ ಮಾನವನ ಅಸ್ಥಿಪಂಜರವನ್ನು ಸ್ವಯಂಪ್ರೇರಿತವಾಗಿ ಹಸ್ತಾಂತರ ಮಾಡಿದ್ದಾನೆ. ಅದನ್ನು ವಿಧಿವಿಜ್ಞಾನ ತಜ್ಞರು ಗಂಟೆ ಗಟ್ಟಲೆ ಸಂಸ್ಕರಣೆಗೆ ಒಳಪಡಿಸಿದ ಬಳಿಕ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದಾದ ಮರುದಿನವೇ ಪೊಲೀಸರು ಮಹಜರು ಹಾಗೂ ದಾಖಲೀಕರಣಕ್ಕಾಗಿ ತನ್ನನ್ನು ಕರೆಯುತ್ತಾರೆ ಎಂದು ಆತ ಭಾವಿಸಿದ್ದ’.
‘ಆದರೂ ಜುಲೈ 16ರವರೆಗೂ ಅಂತಹ ಯಾವುದೇ ಕ್ರಮಗಳನ್ನು ಪೊಲೀಸರು ಕೈಗೊಂಡಿಲ್ಲ. ಸಾಕ್ಷಿದಾರ ನೀಡಬಹುದಾದ ಅತ್ಯಂತ ಪ್ರಮುಖ ಹಾಗೂ ನಿರಾಕರಿಸಲಾಗದ ಸಾಕ್ಷ್ಯಗಳಾದ ಶವ ಹೂತ ಜಾಗ ಮತ್ತು ನೆಲದಿಂದ ಹೊರತೆಗೆದ ಅಸ್ಥಿಪಂಜರಗಳ ಬಗ್ಗೆ ಪೊಲೀಸರು ಸಂಪೂರ್ಣ ನಿರಾಸಕ್ತಿ ತೋರಿಸಿರುವಂತೆ ಕಂಡುಬರುತ್ತಿದೆ. ನಿರಂತರ ವಿಳಂಬವು ದೂರುದಾರನ ಪಾಲಿಗೆ ಆಘಾತಕರವಷ್ಟೇ ಅಲ್ಲ ಅದನ್ನು ಮಾತಿನಲ್ಲಿ ಹೇಳುವುದಕ್ಕೂ ಆಗದಂತಹದ್ದು’.
‘ದೂರುದಾರ ಲಭ್ಯ ಇದ್ದಾನೆ. ಮೊದಲು ಅಸ್ಥಿಪಂಜರಗಳ ಅವಶೇಷಗಳನ್ನು ಹೊರತೆಗೆಯಲು ಸಹಕರಿಸುವ ಮೂಲಕ ತನಿಖೆಗೆ ಸಹಕರಿಸುವ ಇಚ್ಛೆ ಮತ್ತು ಬದ್ಧತೆಯನ್ನೂ ಹೊಂದಿದ್ದಾನೆ. ಆತನೇ ಹೇಳಿಕೊಳ್ಳುವ ಹಾಗೆ ಆತನಿನ್ನೂ ಜೀವಂತ ಇದ್ದಾನೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.