KARNATAKA
ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮೇಲೆ ಬಿತ್ತು ರೇಪ್ ಕೇಸ್, ಇದು ಬ್ಲ್ಯಾಕ್ ಮೇಲ್ ಎಂದ ಶಾಸಕ…!!
ಬೆಂಗಳೂರು : ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ (Vinay Kulkarni) ವಿರುದ್ಧ ಬೆಂಗಳೂರಿನಲ್ಲಿ ರೇಪ್ (Rape case) ಕೇಸ್ ದಾಖಲಾಗಿದೆ. ಮಹಿಳೆಯೋರ್ವಳು ತಮ್ಮ ಮೇಲೆ ಶಾಸಕ ಕುಲಕರ್ಣಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ.
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ಒಂದನೇ ಆರೋಪಿ ಮತ್ತು ಅವರ ಆಪ್ತ ಸಹಾಯಕ ಅರ್ಜುನ್ ಅನ್ನು ಎರಡನೇ ಆರೋಪಿ ಎಂದು ಹೆಸರಿಸಿ ಎಫ್‌ಐಆರ್ ದಾಖಲಿಸಿದ್ದಾರೆ.
2022ರಲ್ಲಿ ಶಾಸಕರನ್ನು ಭೇಟಿ ಮಾಡಿದ್ದೆ. ಬಳಿಕ ರೈತರೊಬ್ಬರಿಂದ ನನ್ನ ಫೋನ್ ನಂಬರ್ ಪಡೆದಿದ್ದ ಶಾಸಕರು, ರಾತ್ರಿ ವೇಳೆ ನನಗೆ ಕರೆ ಮಾಡಲು ಪ್ರಾರಂಭಿಸಿದ್ದರು. ಕೆಲವು ತಿಂಗಳ ನಂತರ ನಗ್ನ ವೀಡಿಯೊ ಕರೆ ಮಾಡುವಂತೆ, ಹೆಬ್ಬಾಳದಲ್ಲಿರುವ ತನ್ನ ಮನೆಗೆ ಬರುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದಾಗ ಶಾಸಕರ ಮನೆಗೆ ಹೋಗದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೌಡಿಗಳ ತಂಡವೊಂದು ಬೆದರಿಕೆ ಹಾಕಿತು. ಏಪ್ರಿಲ್‌ನಲ್ಲಿ ಶಾಸಕರು ನನ್ನನ್ನು ಬೆಳಗಾವಿಗೆ ಕರೆದರು, ಅಲ್ಲಿ ನನ್ನನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದರು. ಆದರೆ, ಕೆಲವರು ಶಾಸಕರನ್ನು ಭೇಟಿಯಾಗಲು ಬಂದಾಗ ನಾನು ತಪ್ಪಿಸಿಕೊಂಡಿದ್ದೆ .ಆಗಾಗ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದರು. ವಿಡಿಯೋ ಕಾಲ್‌ನಲ್ಲಿ ಬೆತ್ತಲಾಗಲು ಹೇಳುತ್ತಿದ್ದರು. ಅದೇ ರೀತಿ ಅವರು ಮನೆಗೆ ಕರೆಸಿಕೊಂಡಿದ್ದರು. 2022ರ ಆಗಸ್ಟ್ 24 ರಂದು ಸಂಜೆ 4 ಗಂಟೆಗೆ ಆಟೋದಲ್ಲಿ ಅವರ ಮನೆಗೆ ಹೋಗಿದ್ದೆ. ಈ ವೇಳೆ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿಮ ಉಲ್ಲೇಖಿಸಿದ್ದಾರೆ. ತಮ್ಮ ಮನೆಯಿಂದ ಕಾರಿನಲ್ಲಿ ಹೊರಗೆ ಬಂದ ಬಂದ ವಿನಯ್ ಕುಲಕರ್ಣಿ ಒಳಗೆ ಕುಳಿತುಕೊಳ್ಳುವಂತೆ ಹೇಳಿದ್ದರು. ಬಳಿಕ ದೇವನಹಳ್ಳಿ ಸಮೀಪದ ಐವಿಸಿ ರೋಡ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಸಂಜೆಯಾದ ಬಳಿಕ ಹಿಂದಿನ ಸೀಟ್‌ನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದೂ ತಮ್ಮ ಮೇಲೆ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಅಕ್ಟೋಬರ್ 2ರಂದು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಶಾಸಕರು ನನ್ನ ಮೇಲೆ ಅತ್ಯಾಚಾರ ಎಸಗಿದರು. ಮರುದಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಯಾರಿಗೂ ವಿಚಾರ ತಿಳಿಸದಂತೆ ಬೆದರಿಕೆ ಹಾಕಿದರು. ನಂತರ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಅರ್ಜುನ್ ಅವರಿಗೆ ಸೂಚಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ದೂರಿನ ಆಧಾರದಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506, 504, 201, 366, 376, 323, 354 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಹಿಳೆ ವಿರುದ್ಧ ಪ್ರತಿ ದೂರು ದಾಖಲಿಸಿದ ಶಾಸಕ ವಿನಯ್ ಕುಲಕರ್ಣಿ
‘ನನ್ನ ವಿರುದ್ಧ ಮಹಿಳೆಯೊಬ್ಬರು ಕಿರುಕುಳ ಆರೋಪ ಹೊರಿಸಿದ್ದಾರೆ ಮತ್ತು ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆʼ, ಎಂದು ಮಾಜಿ ಸಚಿವ, ಹಾಲಿ ಶಾಸಕ ವಿನಯ್ ಕುಲಕರ್ಣಿ ಇಲ್ಲಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಈ ಬೆಳವಣಿಗೆಗಳ ಮಧ್ಯೆ ಆ ಮಹಿಳೆಯು ಮಂಗಳವಾರ ಪ್ರತಿ ದೂರು ನೀಡಿದ್ದು, ಎಫ್‍ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ‘2022ರಲ್ಲಿ ಹಾವೇರಿ ಜಿಲ್ಲೆಯ ರೈತ ಹೋರಾಟಗಾರ್ತಿಯೊಬ್ಬರು ಎಂದು ಹೇಳಿಕೊಂಡು ಕರೆ ಮಾಡಿ ಮಾತನಾಡಿದ್ದರು. ಇದೀಗ ಅವರು ತನಗೆ ವಂಚನೆ ಮಾಡಲಾಗಿದೆ. ನೀವು ಮಾತನಾಡಿರುವ ವಿಡಿಯೊ ಕಾಲ್, ಮೊಬೈಲ್ ಸಂಭಾಷಣೆ ಪ್ರಸಾರ ಮಾಡಲಾಗುವುದು ಎಂದು ಷಂಡ್ಯಂತ್ರ ರೂಪಿಸಿದ್ದರು’ ಎಂದು ವಿನಯ್ ಕುಲಕರ್ಣಿ ದೂರಿದ್ದಾರೆ.