DAKSHINA KANNADA
ಸಮನ್ಸ್ ನೆಪದಲ್ಲಿ ಅತ್ಯಾಚಾರ ಸಂತ್ರಸ್ಥೆ ಯುವತಿ ಮೇಲೆ ಪೊಲೀಸ್ ಸಿಬ್ಬಂದಿಯಿಂದ ಅತ್ಯಾಚಾರ – ಆರೋಪಿ ಅರೆಸ್ಟ್..!!
ಪುತ್ತೂರು ಸೆಪ್ಟೆಂಬರ್ 28: ಸಮನ್ಸ್ ನೆಪದಲ್ಲಿ ಯುವತಿಯ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿ ಮಾಡಿದ ಆರೋಪಿ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಶಿವರಾಜ್ ಎಂದು ಗುರುತಿಸಲಾಗಿದ್ದು, ಇವನು ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆ ಯುವತಿಯ ಮನೆಗೆ ಸಮನ್ಸ್ ನೀಡಲು ತೆರಳಿದ್ದು, ಈ ಸಂದರ್ಭದಲ್ಲಿ ಸಲುಗೆ ಬೆಳೆಸಿಕೊಂಡು ಯುವತಿಯ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಯುವತಿಯು ಗರ್ಭವತಿಯಾದ ಬಳಿಕ ತನ್ನ ಪ್ರಭಾವ ಬಳಸಿ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಶಿವರಾಜ್ ಒತ್ತಡ ಹೇರಿದ್ದ ಎಂದು ಆರೋಪಿಸಲಾಗಿದೆ.
ಎರಡು ವರ್ಷಗಳ ಹಿಂದೆ ನನ್ನ ಮಗಳು ಅತ್ಯಾಚಾರಕ್ಕೆ ಒಳಗಾಗಿದ್ದಳು. ಆ ಪ್ರಕರಣ ಆರು ತಿಂಗಳ ಹಿಂದೆ ಮುಗಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ, ದಾಖಲೆ, ಸಮನ್ಸ್ ನೀಡುವ ವಿಚಾರಕ್ಕೆ ಮನೆಗೆ ಬರುತ್ತಿದ್ದ. ಆಗ ಪರಿಚಯಸ್ಥನಾಗಿದ್ದು, ಪ್ರಕರಣ ಮುಗಿದಿದ್ದರೂ ಬೇರೆ ಬೇರೆ ನೆಪವೊಡ್ಡಿ ಮನೆಗೆ ಬರುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು’ ಎಂದು ಸಂತ್ರಸ್ತೆಯ ತಂದೆ ಕಡಬ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಗಳನ್ನು ವಿಚಾರಿಸಿದಾಗ, ಕಡಬ ಪೊಲೀಸ್ ಸಿಬ್ಬಂದಿ ನನ್ನನ್ನು ಮದುವೆ ಆಗು ವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದೀಗ ಐದೂವರೆ ತಿಂಗಳ ಗರ್ಭಿಣಿ ಆಗಿರುವುದಾಗಿ ತಿಳಿಸಿದ್ದಾಳೆ. ಈ ಮಧ್ಯೆ ನನ್ನ ಮಗಳು ಹಾಗೂ ಪತ್ನಿಯನ್ನು ಆತ ಮಂಗಳೂರು ಎಲ್ಲಿಯೋ ಅಜ್ಞಾತ ಸ್ಥಳದಲ್ಲಿರಿಸಿದ್ದು, ಅವರನ್ನು ಪತ್ತೆ ಹಚ್ಚಬೇಕು. ಆರೋಪಿಯನ್ನು ಬಂಧಿಸಿ ಆತನನ್ನು ವಿಚಾರಣೆ ನಡೆಸಿ ನನ್ನ ಮಗಳಿಗೆ ನ್ಯಾಯ ಕೊಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಈ ಹಿನ್ನಲೆ ಆರೋಪಿ ಪೇದೆ ಶಿವರಾಜ್ ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login