Connect with us

    LATEST NEWS

    ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ

    ನವದೆಹಲಿ, ಜನವರಿ 02: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ನಿರ್ಮಿಸಿರುವ ಮೂರ್ತಿ ಆಯ್ಕೆಯಾಗಿದೆ.

    ರಾಮನ ಮೂರ್ತಿ ಆಯ್ಕೆ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಎಲ್ಲಿ ರಾಮನೋ ಅಲ್ಲಿ ಹನುಮನು’ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಅರುಣ್‌ ಯೋಗಿರಾಜ್‌ ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.

    ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು’ ಎಂದು ಬರೆದುಕೊಂಡಿದ್ದಾರೆ.

    ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ‘ಎಕ್ಸ್‌’ನಲ್ಲಿ ಹರ್ಷ ಹಂಚಿಕೊಂಡಿರುವುದು ಹಾಗೂ ಶುಭಾಶಯ ಕೋರಿದ್ದಾರೆ.

    ಅರುಣ್‌ ಸಿದ್ಧಪಡಿಸಿದ ಮೂರ್ತಿಯೇ ಆಯ್ಕೆಯಾಗಿರುವುದರಿಂದ ಮೈಸೂರಿಗರಲ್ಲಿ ಸಂಭ್ರಮ ಮನೆ ಮಾಡಿದೆ. ಐದು ವರ್ಷದ ಬಾಲಕನ ಪ್ರತಿರೂಪದಂತೆ ಮೂರ್ತಿ ಸಿದ್ಧಪಡಿಸಲು ಮೂವರು ಶಿಲ್ಪಿಗಳಿಗೆ ಸೂಚಿಸಲಾಗಿತ್ತು. ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್. ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ತಮ್ಮ ಕೌಶಲದಲ್ಲಿ ಅರಳಿದ ಮೂರ್ತಿಗಳನ್ನು ಒಪ್ಪಿಸಿದ್ದರು. ಇದರಲ್ಲಿ ಅರುಣ್ ಯೋಗಿರಾಜ್ ಕೆತ್ತಿರುವ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ.

    ಮೂರ್ತಿ ನಿರ್ಮಾಣಕ್ಕಾಗಿ ಎಚ್‌.ಡಿ. ಕೋಟೆ ತಾಲ್ಲೂಕು ಕೃಷ್ಣಶಿಲೆಯನ್ನು ಅರುಣ್ ಬಳಸಿದ್ದಾರೆ. ಮೂರ್ತಿಗೆ ಅಂತಿಮ ರೂಪ ನೀಡಲು 6 ತಿಂಗಳು ತೆಗೆದುಕೊಂಡಿದ್ದಾರೆ. ಅದು 8 ಅಡಿ ಎತ್ತರ, ಮೂರೂವರೆ ಅಡಿ ಅಗಲ ಇದೆ. ಪಾದದಿಂದ ಹಣೆವರೆಗೆ 51 ಇಂಚು ಎತ್ತರ ಇದ್ದರೆ, ಅಲ್ಲಿಂದಾಚೆಗೆ ಪ್ರಭಾವಳಿಯ ಎತ್ತರ ಸೇರಿದೆ. ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಐದು ವರ್ಷದ ಮಗುವಿನಂತೆ ಕಾಣುವ ಭಗವಾನ್ ರಾಮನ ಮೂರ್ತಿ ಇದಾಗಿದೆ ಎನ್ನುತ್ತಾರೆ ಅವರು.

    ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆ, ಸುಭಾಷ್‌ ಚಂದ್ರ ಬೋಸರ ಪ್ರತಿಮೆಗಳನ್ನು ಅವರು ಮಾಡಿದ್ದರು. ಇದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ಬಂದಿತ್ತು. ಅವರು ಶಿಲ್ಪಿಯನ್ನು ಭೇಟಿಯಾಗಿ ಅಭಿನಂದನೆಯನ್ನೂ ಸಲ್ಲಿಸಿದ್ದರು. ಅಯೋಧ್ಯೆಯ ರಾಮಲಲ್ಲಾ ಮೂರ್ತಿ ತಯಾರಿಕೆಗೆ ಪ್ರಸ್ತಾವ ಸಲ್ಲಿಕೆಗೆ ಸಿಕ್ಕಿದ್ದ ಅವಕಾಶವನ್ನು ಅರುಣ್ ಬಳಸಿಕೊಂಡಿದ್ದರು. ಅವರು ನೀಡಿದ್ದ ವಿವರಣೆ ಸಮಿತಿಗೆ ಇಷ್ಟವಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply