DAKSHINA KANNADA
ಜನವರಿ 14,15 ಮತ್ತು 16 ರಂದು ಮಾಜಿ ಸಚಿವ ಬಿ. ರಮಾನಾಥ ರೈ ಪಾದಯಾತ್ರೆ

ಜನವರಿ 14,15 ಮತ್ತು 16 ರಂದು ಮಾಜಿ ಸಚಿವ ಬಿ. ರಮಾನಾಥ ರೈ ಪಾದಯಾತ್ರೆ
ಮಂಗಳೂರು ಜನವರಿ 8: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿ ಹಾಗೂ ವಿಜಯಾ ಬ್ಯಾಂಕ್ ವಿಲೀನ ಯೋಜನೆಯನ್ನು ವಿರೋಧಿಸಿ ಕಾಂಗ್ರೇಸ್ ಪಕ್ಷ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.
ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿ ಬಿ.ಸಿ.ರೋಡ್ ನಿಂದ ಅಡ್ಡ ಹೊಳೆವರೆಗೆ ನಡೆಯಲಿದೆ. ಈ ಸಂಬಂಧ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಇದೀಗ ಅರ್ಧದಲ್ಲೇ ಕಾಮಗಾರಿಯನ್ನು ನಿಲ್ಲಿಸಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಗಳಾಗುತ್ತಿದೆ. ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕೆಂದು ಒತ್ತಾಯಿಸಿ ಜನವರಿ 14,15 ಮತ್ತು 16 ರಂದು ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ನೆಲ್ಯಾಡಿಯಿಂದ ಬಿ.ಸಿ.ರೋಡ್ ವರೆಗೆ ಪಾದಯಾತ್ರೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಪ್ರತಿಭಟನಾ ಪಾದಯಾತ್ರೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.

ಜಿಲ್ಲೆಯ ಪ್ರಮುಖ ಬ್ಯಾಂಕ್ ಆದ ವಿಜಯಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ನಡೆಸುವ ಪ್ರಕ್ರಿಯೆಯನ್ನು ವಿರೋಧಿಸಿ ಜನವರಿ 10 ರಂದು ಜಿಲ್ಲೆಯ ಎಲ್ಲಾ ವಿಜಯಾ ಬ್ಯಾಂಕ್ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು. ಛತ್ರಪತಿ ಶಿವಾಜಿ ಜ್ಯಾತ್ಯಾತೀತ ನಾಯಕ ಎನ್ನುವ ವಿಶೇಷ ಕಾರ್ಯಕ್ರಮವನ್ನೂ ಜನವರಿ 12 ರಂದು ನಡೆಸಲಾಗುವುದು ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.