ಬಂದ್ ಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಮಂಗಳೂರು ಜನವರಿ 8: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘನೆಗಳು ಮಂಗಳವಾರ ಮತ್ತು ಬುಧವಾರ ಬಂದ್ ಗೆ ಕರೆ ನೀಡಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಜನಜೀವನ ಸಾಮಾನ್ಯ ಸ್ಥಿತಿಯಲ್ಲಿದ್ದು, ಬೆರಳೆಣಿಕೆಯ ಖಾಸಗಿ ಬಸ್ ಗಳು ಸಂಚಾರ ನಡೆಸುತ್ತಿವೆ. ಉಳಿದಂತೆ ಆಟೋ ಹಾಗೂ ಇನ್ನಿತರ ಸಾರಿಗೆ ಹಾಗೂ ಕೆಎಸ್ ಆರ್ ಟಿಸಿ ಬಸ್ ಸಂಚಾರವೂ ಸಾಮಾನ್ಯವಾಗಿದೆ. ಮುಂಜಾಗೃತ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಮುಚ್ಚಿವೆ.

ಭಾರತ್ ಬಂದ್ ಗೆ ಪುತ್ತೂರಿನಲ್ಲಿಯೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುತ್ತೂರು ನಗರದಾದ್ಯಂತ ಎಲ್ಲಾ ಸೇವೆಗಳು ಎಂದಿನಂತೆ ಕಾರ್ಯಾಚರಿಸುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಹಿನ್ನಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದನ್ನು ಹೊರತುಪಡಿಸಿ ಉಳಿದೆಲ್ಲವೂ ಎಂದಿನಂತೆಯೇ ಇದೆ. ಸರಕಾರಿ ಬಸ್ ಗಳು, ಅಟೋ ಸರ್ವೀಸ್, ಟೆಂಪೋ ಸರ್ವೀಸ್ ಎಂದಿನಂತೆಯೇ ಇದ್ದು, ಖಾಸಗಿ ಬಸ್ ಗಳು ಮಾತ್ರ ದಿಢೀರನೆ ತಮ್ಮ ಸೇವೆ ಸ್ಥಗಿತಗೊಳಿಸಿದೆ. ಎಲ್ಲಾ ಅಂಗಡಿ-ಮುಂಗಟ್ಟುಗಳು ತೆರೆಯಲಾರಂಭಿಸಿದ್ದು, ದೈನಂದಿನ ವ್ಯವಹಾರವನ್ನು ಆರಂಭಿಸಿದೆ.

ಕಡಬ ಮುಖ್ಯ ಪೇಟೆಯಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿವೆ. ಅಲ್ಲದೆ ಕೆ.ಎಸ್. ಆರ್. ಟಿ ಬಸ್ ಗಳ ಒಡಾಟವೂ ಎಂದಿನಂತೆ ಇದೆ.ಇನ್ನು ಖಾಸಗಿ ಬಸ್, ಆಟೋ ರಿಕ್ಷಾ ಸೇವೆಯಲ್ಲೂ ಯಾವುದೇ ಬದಲಾವಣೆಗಳು ಇಲ್ಲ.ಇನ್ನು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯ ನಡುವೆಯೂ ಕೆಲ ವಿದ್ಯಾರ್ಥಿಗಳು ಬಸ್ ನಿಲ್ದಾಣ ದಲ್ಲಿ ಕಾಯುತ್ತಿರುವುದು ಕಂಡು ಬರುತ್ತಿದೆ.

Facebook Comments

comments