National
ರಾಜ್ಯಸಭೆಗೆ ನಾಲ್ವರೂ ಅವಿರೋಧ ಆಯ್ಕೆ
ಬೆಂಗಳೂರು, ಜೂನ್ 12: ಕರ್ನಾಟಕದ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನಿಂದ ಹೆಚ್.ಡಿ. ದೇವೇಗೌಡ ಮತ್ತು ಬಿಜೆಪಿ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ ಅವಿರೋಧ ಆಯ್ಕೆಯಾಗಿದ್ದಾರೆ.
ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಈ ಬಗ್ಗೆ ಮಾಹಿತಿ ನೀಡಿದ್ದು, “ರಾಜ್ಯಸಭಾ ಚುನಾವಣೆ-2020ರಲ್ಲಿ ಕರ್ನಾಟಕದಲ್ಲಿ ನಾಲ್ಕೂ ಜನ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ” ಎಂದಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ-ಜೆಡಿಎಸ್ ಸೇರಿದಂತೆ ಮೂರೂ ಪಕ್ಷದ ಶಾಸಕರ ಸಂಖ್ಯೆಗೆ ಅನುಗುಣವಾಗಿ ಚುನಾವಣೆ ನಡೆಸದೇ ಎಲ್ಲ ನಾಲ್ಕೂ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಒಂದು ಸ್ಥಾನಕ್ಕೆ 28 ಮತಗಳ ಅಗತ್ಯ ಇರುವುದರಿಂದ ಬಿಜೆಪಿ ಎರಡು ಸ್ಥಾನ, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ನಿರಾಯಾಸ ಗೆಲ್ಲಬಹುದಿತ್ತು. ಒಬ್ಬ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರೂ, ಯಾವುದೇ ಶಾಸಕರ ಅನುಮೋದನೆ ಇಲ್ಲದಿದ್ದರಿಂದ ನಾಮಪತ್ರ ತಿರಸ್ಕೃತವಾಗಿತ್ತು. ಶುಕ್ರವಾರ (ಇಂದು) ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದ್ದು ನಾಲ್ವರು ಮಾತ್ರ ಕಣದಲ್ಲಿ ಇದ್ದುದರಿಂದ ನಿರೀಕ್ಷೆಯಂತೆ ಅವಿರೋಧ ಆಯ್ಕೆಯನ್ನು ಘೋಷಿಸಲಾಗಿದೆ.