LATEST NEWS
ಇನ್ನೂ ಏರಲಿದೆ ತೈಲದರದ ಹೊರೆ, ಏರಿಕೆ ಹಿಂದಿನ ಕರಾಮತ್ತು ಏನ್ಗೊತ್ತಾ..?
ಏಳು ದಿನಗಳಲ್ಲಿ 4 ರೂ. ಏರಿಕೆ, ಲಾಕ್ಡೌನ್ ಬೇಗೆಯಲ್ಲಿ ಮತ್ತೊಂದು ಬರೆ
ನವದೆಹಲಿ, ಜೂನ್ 13, ಕೊರೊನಾ ಲಾಕ್ ಡೌನ್ ಬಳಿಕ ದೇಶದಲ್ಲಿ ಸತತ ಏಳನೇ ದಿನವೂ ಪೆಟ್ರೋಲ್, ಡೀಸೆಲ್ ರೇಟ್ ಏರಿಕೆಯಾಗಿದೆ. ಪೆಟ್ರೋಲ್ ಲೀಟರಿಗೆ ಇಂದು 59 ಪೈಸೆ ಹಾಗೂ ಡೀಸೆಲಿಗೆ 58 ಪೈಸೆ ಏರಿದ್ದು ರಾಜಧಾನಿ ದೆಹಲಿಯಲ್ಲಿ ಕ್ರಮವಾಗಿ ಪೆಟ್ರೋಲಿಗೆ 75.16 ರೂಪಾಯಿ ಹಾಗೂ ಡೀಸೆಲಿಗೆ 73.39 ರೂಪಾಯಿ ಆಗಿದೆ.
ಹಾಗೆಯೇ ಮುಂಬೈನಲ್ಲಿ ಈ ದರ ಕ್ರಮವಾಗಿ 82.10 ಹಾಗೂ 72.03 ಆಗಿದ್ದರೆ, ಬೆಂಗಳೂರಿನಲ್ಲಿ 77.59 ಹಾಗೂ 69.58 ಆಗಿ ಏರಿಕೆಯಾಗಿದೆ. ರಾಜ್ಯವಾರು ತೆರಿಗೆ ವ್ಯತ್ಯಾಸ ಇರುವ ಕಾರಣ ಈ ದರ ರಾಜ್ಯಕ್ಕೆ ತಕ್ಕಂತೆ ವ್ಯತ್ಯಾಸವೂ ಆಗುತ್ತೆ. ಮಂಗಳೂರಿನಲ್ಲಿ ಇವತ್ತು ಪೆಟ್ರೋಲ್ ಲೀಟರಿಗೆ 76 ರೂ. ಇದ್ದರೆ, ಡೀಸೆಲ್ ದರ 69 ರೂ. ಇದೆ. ಲಾಕ್ ಡೌನ್ ನಂತರದ ಕಳೆದ ಏಳು ದಿನಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲಿಗೆ ಲೀಟರಿಗೆ ನಾಲ್ಕು ರೂಪಾಯಿನಷ್ಟು ಬೆಲೆ ಏರಿದೆ. ಲಾಕ್ ಡೌನ್ನಲ್ಲಿ ಜನ ಕಂಗಾಲಾಗಿರುವ ನಡುವಲ್ಲಿ ಒಂದೇ ಸಮನೆ ಪೆಟ್ರೋಲ್ ರೇಟ್ ಏರಿಸುತ್ತಿರುವುದು ಸಾರ್ವಜನಿಕರ ಚಿಂತೆಗೆ ಕಾರಣವಾಗಿದೆ.
ಹಾಗಾದ್ರೆ ಬೆಲೆ ಏರಿದ್ದು ಹೇಗೆ…
ನಿಜಕ್ಕಾದರೆ ಕೇಂದ್ರ ಸರಕಾರ ಈಗ ಯಾವುದೇ ಹೆಚ್ಚುವರಿ ಟ್ಯಾಕ್ಸ್ ವಿಧಿಸಿಲ್ಲ. ನಾಲ್ಕು ತಿಂಗಳ ಹಿಂದಿನ ಅವಧಿಗೆ ಹೋಲಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯೇ ಇದೆ. ಹೀಗಿದ್ದರೂ ಆಯಿಲ್ ಕಂಪನಿಗಳು ದರ ಏರಿಸಿದ್ದು ಯಾಕೆ ಅನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಆದರೆ, ಲಾಕ್ ಡೌನ್ ತ್ರೀ ಅವಧಿಯ ಮೇ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರ ಆದಾಯ ಸಂಗ್ರಹದ ಗುರಿಯಿಟ್ಟುಕೊಂಡು ತೈಲದ ಮೇಲಿನ ಎಕ್ಸೈಸ್ ಟ್ಯಾಕ್ಸ್ ಏರಿಸಿತ್ತು. ಪೆಟ್ರೋಲ್ ಲೀಟರಿಗೆ 13 ರೂ. ಮತ್ತು ಡೀಸೆಲಿಗೆ 10 ರೂ. ನಷ್ಟು ಕೇಂದ್ರ ತೆರಿಗೆಯನ್ನು ಒಮ್ಮೆಲೇ ಹೆಚ್ಚಿಸಿತ್ತು. ಲಾಕ್ ಡೌನ್ ಟೈಮಲ್ಲಿ ಘೋಷಿಸಿದ್ದ ಪರಿಹಾರ ಕ್ರಮಗಳಿಗೆ ಪರ್ಯಾಯವಾಗಿ ತೈಲ ದರ ರೂಪದಲ್ಲಿ ಆದಾಯ ಸಂಗ್ರಹಕ್ಕೆ ಇಳಿದಿತ್ತು. ಆದರೆ, ಒಮ್ಮೆಲೇ ಅಷ್ಟು ದೊಡ್ಡ ಮಟ್ಟದ ತೆರಿಗೆ ಹೆಚ್ಚಳವಾದರೂ ಅದರ ಬಿಸಿ ಜನರಿಗೆ ತಟ್ಟಿರಲಿಲ್ಲ. ಲಾಕ್ಡೌನ್ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲೂ ತೈಲದ ಬೆಲೆ ವಿಪರೀತ ಕುಸಿದಿತ್ತು. ಒಂದು ಹಂತದಲ್ಲಿ ಕಚ್ಚಾತೈಲ ಬ್ಯಾರೆಲ್ ಬೆಲೆ 20 ಡಾಲರ್ ಗಿಂತಲೂ ಕಡಿಮೆಗೆ ಇಳಿಕೆಯಾಗಿತ್ತು. ಇದೇ ವೇಳೆ, ಲಾಕ್ ಡೌನ್ ಕಾರಣ ದೇಶದಲ್ಲಿ ತೈಲದ ಬಳಕೆ ತುಂಬ ಕಡಿಮೆ ಇದ್ದ ಕಾರಣ ಆಯಿಲ್ ಕಂಪೆನಿಗಳು ತೆರಿಗೆ ಹೆಚ್ಚಳದ ಬರೆಯನ್ನು ಜನರಿಗೆ ವರ್ಗಾಯಿಸಿರಲಿಲ್ಲ.
ಇದೀಗ ಕೊರೊನಾ ಅನ್ ಲಾಕ್ ಕಾರಣ ಬಹುತೇಕ ಕೈಗಾರಿಕೆಗಳು ಮತ್ತು ಜನರಿಂದ ಬೇಡಿಕೆ, ವಹಿವಾಟುಗಳು ಹೆಚ್ಚಿದ್ದರಿಂದ ತೈಲದ ಬಳಕೆಯೂ ಏರಿಕೆಯಾಗಿದೆ. ಅತ್ತ ಕಚ್ಚಾ ಬೈಲದ ಬೆಲೆಯೂ ತುಸು ಏರುಗತಿಗೆ ಹೊರಳುತ್ತಿದೆ. ಪೂರೈಕೆ ಮತ್ತು ಬೇಡಿಕೆಯ ಸಮತೋಲನ ಸಾಧಿಸಲು ಆಯಿಲ್ ಕಂಪೆನಿಗಳು ಈಗ ಪೈಸೆಗಳ ಲೆಕ್ಕದಲ್ಲಿ ದಿನವೂ ತೈಲದ ದರವನ್ನು ಏರಿಸಲು ಆರಂಭಿಸಿವೆ. ಹೀಗಾಗಿ ತೈಲ ದರ ಏರಿಕೆಯ ಬಿಸಿ ಇನ್ನು ಕೈಸುಡುವ ಹಂತಕ್ಕೂ ಹೋಗುವ ಅಪಾಯ ಇಲ್ಲ ಎನ್ನುವಂತಿಲ್ಲ. ಇದೇ ಕಾರಣಕ್ಕೆ 82 ದಿನಗಳ ನಂತರ ತೈಲದ ದರ ಏರುಗತಿಯಲ್ಲಿದೆ.
ಕೇರ್ ರೇಟಿಂಗ್ಸ್ ಎನ್ನುವ ಅಧ್ಯಯನ ವರದಿ ಪ್ರಕಾರ, ಕೇಂದ್ರ ಸರಕಾರದ ತೆರಿಗೆ ಹೆಚ್ಚಳವನ್ನು ವಿಪರೀತ ಎನ್ನುವ ರೀತಿ ತೋರಿಸಿದೆ. ಕೇಂದ್ರ ಸರಕಾರ ಪೆಟ್ರೋಲ್ ಮೂಲದರದ ಮೇಲೆ 270 ಶೇಕಡಾದಷ್ಟು ತೆರಿಗೆ ಸಂಗ್ರಹಿಸುತ್ತಿದೆ. ಹಾಗೆಯೇ ಡೀಸೆಲ್ ಮೂಲದರದ ಮೇಲೆ 256 ಶೇಕಡಾ ತೆರಿಗೆ ವಿಧಿಸಿದ್ದಾಗಿ ಹೇಳಿಕೊಂಡಿದೆ. ಕೇಂದ್ರ ಸರಕಾರದ ನೋಟಿಫಿಕೇಶನ್ ಪ್ರಕಾರ, ಹೆಚ್ಚುವರಿ 10 ರೂಪಾಯಿ ತೆರಿಗೆಯಲ್ಲಿ 8 ರೂ. ಮೂಲಸೌಕರ್ಯಕ್ಕಾಗಿ ಬಳಕೆಯಾದರೆ, 2 ರೂ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕವಾಗಿ ಸಂಗ್ರಹಿಸಲಾಗುತ್ತಿದೆ. ಹಾಗೆಯೇ ಡೀಸೆಲ್ ಮೇಲಿನ 13 ರೂಪಾಯಿ ಹೆಚ್ಚುವರಿ ತೆರಿಗೆಯಲ್ಲಿ 8 ರೂಪಾಯಿ ಮೂಲಸೌಕರ್ಯ ಬಳಕೆಗೆ ವ್ಯಯಿಸಿದರೆ, 5 ರೂ. ಸ್ಪೆಷಲ್ ಟ್ಯಾಕ್ಸ್ ಆಗಿ ಸಂಗ್ರಹ ಮಾಡಲಾಗುತ್ತಿದೆ. ಮೇ 6ರಂದು ಈ ಘೋಷಣೆ ಮಾಡಿದ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸದ್ಯಕ್ಕೆ ಈ ಹೆಚ್ಚುವರಿ ತೆರಿಗೆಯ ದರ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲ್ಲ ಎಂದು ಹೇಳಿದ್ದರು.
ಇದಕ್ಕೂ ಮುನ್ನ ಕಳೆದ ಮಾರ್ಚ್ 14ರಂದು ಕೇಂದ್ರ ಸರಕಾರ, ಡೀಸೆಲ್ ಮತ್ತು ಪೆಟ್ರೋಲ್ ಲೀಟರ್ ಮೇಲಿನ ಸುಂಕವನ್ನು 3 ರೂ.ನಂತೆ ಏರಿಸಿತ್ತು. ಈ ಮೂರು ರೂಪಾಯಿ ಹೆಚ್ಚಳದಿಂದ 39 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಸಂಗ್ರಹದ ಗುರಿ ಇರಿಸಿತ್ತು. ಆ ಸಂದರ್ಭದಲ್ಲಿಯೂ ಈ ಹೆಚ್ಚುವರಿ ತೆರಿಗೆಯ ಬರೆ ಜನರ ಮೇಲೆ ಬಿದ್ದಿರಲಿಲ್ಲ. ಆವತ್ತು ಕೂಡ, ಕಚ್ಚಾತೈಲ ಬೆಲೆ ಮೊದಲೇ ಕಡಿಮೆ ಇದ್ದುದರಿಂದ ಆಯಿಲ್ ಕಂಪನಿಗಳಿಗೆ ಉಳಿಕೆಯಾಗುತ್ತಿದ್ದ ಹಣವನ್ನು ಕೇಂದ್ರ ಸರಕಾರ ಕಬಳಿಸಿತ್ತು ಅಷ್ಟೇ.. ಈ ನಡುವೆ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಏರಿಳಿತದ ಲಾಭ ಪಡೆಯಲೆಂದೇ ಕೇಂದ್ರ ಸರಕಾರ ಕಳೆದ ಬಾರಿ ಕಾನೂನು ತಿದ್ದುಪಡಿ ತಂದಿತ್ತು. 2020ರ ಫೈನಾನ್ಸ್ ಬಿಲ್ ಪ್ರಕಾರ, ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಶೇಕಡಾ 8ರಷ್ಟು ಹೆಚ್ಚುವರಿ ಎಕ್ಸೈಸ್ ಟ್ಯಾಕ್ಸ್ ಹಾಕಬಹುದು. ಹಾಗೆಯೇ ಹೆಚ್ಚುವರಿ ಸ್ಪೆಷಲ್ ಟ್ಯಾಕ್ಸನ್ನು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ ಶೇ.18 ಮತ್ತು 12ರಷ್ಟು ವಿಧಿಸಲು ಅವಕಾಶ ಮಾಡಿದೆ. ಒಟ್ಟಿನಲ್ಲಿ ಜಾಗತಿಕ ಮಾರುಕಟ್ಟೆಯ ಏರಿಳಿತದ ಮಧ್ಯೆ ಜನರಿಗೆ ಹೊರೆಯಾಗದಂತೆ ಆದಾಯ ಸಂಗ್ರಹಿಸುತ್ತಿರುವುದೇ ಕೇಂದ್ರದ ಕರಾಮತ್ತು ಅನ್ನಬೇಕಷ್ಟೇ..!