National
ಸೇನೆ, ಸರಕಾರವನ್ನು ಪ್ರಶ್ನಿಸುವ ಕಾಂಗ್ರೇಸ್ ಪಕ್ಷಕ್ಕೆ ಚೀನಾದ ಮೇಲೆ ವ್ಯಾಮೋಹವೇಕೆ ?

ನವದೆಹಲಿ, ಜೂನ್ 26: ಲಡಾಕ್ ನ ಗಲ್ವಾನ್ ವ್ಯಾಲಿಯಲ್ಲಿ ಜೂನ್ 15 ರಂದು ನಡೆದ ಚೀನಾ ಮತ್ತು ಭಾರತೀಯ ಸೇನೆಯ ನಡುವಿನ ಹಿಂಸೆಯ ಬಳಿಕ ಕಾಂಗ್ರೇಸ್ ಪಕ್ಷ ನಿರಂತರವಾಗಿ ಭಾರತೀಯ ಸೇನೆ ಹಾಗೂ ಕೇಂದ್ರ ಸರಕಾರವನ್ನು ಟೀಕಿಸಲಾರಂಭಿಸಿದೆ. ಚೀನಾ ಸೈನಿಕರು ಭಾರತದ ಗಡಿಯೊಳಗೆ ಪ್ರವೇಶಿಸಿದ್ದರೇ, ಭಾರತೀಯ ಸೇನೆಯೇ ಚೀನಾ ಗಡಿ ನುಗ್ಗಿತ್ತೇ, ಭಾರತೀಯ ಸೇನೆಗೆ ಶಸ್ತಾಸ್ತ್ರಗಳನ್ನು ನೀಡದೆ ಗಡಿರೇಖೆಗೆ ಕಳುಹಿಸಿರುವುದು ಯಾರು ಎನ್ನುವ ಪ್ರಶ್ನೆಗಳನ್ನು ಹಾಕಿ ಭಾರತೀಯ ಸೇನೆಯ ಮನೋಬಲವನ್ನು ಕುಗ್ಗಿಸುವ ಪ್ರಯತ್ನವನ್ನೂ ಪಕ್ಷ ಮಾಡಿತ್ತು. ಆದರೆ ಚೀನಾ ಸೇನೆಯ, ಚೀನಾ ಸರಕಾರದ ವಿರುದ್ಧವಾಗಲೀ ಯಾವುದೇ ಹೇಳಿಕೆಗಳನ್ನು ನೀಡದೆ ಈ ವಿಚಾರದಲ್ಲಿ ತನ್ನ ಅಂತರವನ್ನೂ ಕಾಯ್ದುಕೊಂಡಿದ್ದರು.
ಚೀನಾ ಸರಕಾರದ ಮೇಲಿನ ಈ ಮೃದುಧೋರಣೆಗೆ ಚೀನಾದ ಕಮ್ಯುನಿಷ್ಟ್ ಪಕ್ಷ ಹಾಗೂ ಕಾಂಗ್ರೇಸ್ ಪಕ್ಷದ ನಡುವೆ ನಡೆದಿರುವ ಒಪ್ಪಂದ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವೆಂಬಂತೆ ಗಾಂಧೀ ಪರಿವಾರ ನಡೆಸಿಕೊಂಡು ಬರುತ್ತಿರುವ ರಾಜೀವ್ ಗಾಂಧಿ ಫೌಂಡೇಶನ್ ಗೆ ಚೀನಾ ಸರಕಾರ ನಿರಂತರವಾಗಿ ನೀಡುತ್ತಿರುವ ಹಣದ ಮಾಹಿತಿ ಇದೀಗ ಸಾರ್ವಜನಿಕವಾಗಿದೆ. ಸಾಮಾಜಿಕ ಚಟುವಟಿಕೆಗಳಿಗಾಗಿ ಪ್ರಾರಂಭವಾದ ರಾಜೀವ್ ಗಾಂಧಿ ಫೌಂಡೇಶನ್ ನ ಬಹುತೇಕ ಟ್ರಸ್ಟಿಗಳು ಗಾಂಧೀ ಪರಿವಾರ ಹಾಗೂ ಪರಿವಾರಕ್ಕೆ ಆಪ್ತವಾಗಿರುವವರೇ ಆಗಿದ್ದಾರೆ. ಸೋನಿಯಾ ಗಾಂಧಿ ಫೌಂಡೇಶನ್ ನ ಅಧ್ಯಕ್ಷೆಯಾಗಿದ್ದರೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಟ್ರಸ್ಟಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಆರ್ಥಿಕ ತಜ್ಞ ಮೊಂಟೆಕ್ ಸಿಂಗ್ ಅಹುವಾಲಿಯಾ, ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ್ದ ಮಾಜಿ ಗೃಹಸಚಿವ ಬಿ. ಚಿದಂಬರ್ ಕೂಡಾ ಈ ಫೌಂಡೇಶನ್ ನ ಟ್ರಸ್ಟಿಗಳು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರಧಾನಿಯಾಗಿರುವ ಸಂದರ್ಭದಲ್ಲೇ ದೆಹಲಿಯಲ್ಲಿರುವ ಚೀನಾ ಧೂತವಾಸದಿಂದ 2006 ಡಿಸೆಂಬರ್ 4 ರಲ್ಲಿ ರಾಜೀವ್ ಫೌಂಡೇಶನ್ ಗೆ 90 ಲಕ್ಷ ರೂಪಾಯಿಗಳ ದೇಣಿಗೆ ನೀಡಲಾಗಿತ್ತು.

ಇದೇ ರೀತಿ 2006 ಜನವರಿ 27 ಕ್ಕೆ ಚೀನಾ ಸರಕಾರದಿಂದಲೂ 10 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಲಾಗಿತ್ತು. ಈ ದೇಣಿಗೆಯ ಹಿಂದೆ ಭಾರತ ಹಾಗೂ ಚೀನಾ ನಡುವೆ ನಡೆಯಲಿದ್ದ ಮುಕ್ತ ವ್ಯಾಪಾರ ಒಪ್ಪಂದ ಕುದುರಿಸುವ ಯೋಜನೆಯೂ ಇತ್ತು ಎನ್ನುವುದು ಇದೀಗ ಭಾರತೀಯ ಜನತಾ ಪಕ್ಷದ ಆರೋಪವಾಗಿದೆ. ಭಾರತ ಚೀನಾ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಸಾಧಕ-ಬಾಧಕದ ಕುರಿತ ಸ್ಟಡಿಯನ್ನೂ ಇದೇ ರಾಜೀವ್ ಗಾಂಧಿ ಫೌಂಡೇಶನ್ ಎರಡೆರಡು ಬಾರಿ ಮಾಡಿತ್ತು.
ಈ ಸ್ಟಡಿಯ ಹಿಂದೆಯೂ ಚೀನಾದ ಕೈವಾಡವಿತ್ತೇ ಎನ್ನುವ ಗುರುತರ ಆರೋಪವೂ ಇದೀಗ ಕೇಳಿ ಬರಲಾರಂಭಿಸಿದೆ. ಚೀನಾದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅನುಗುಣವಾಗಿ ದೇಶದಲ್ಲಿ ವಾತಾವರಣ ಸೃಷ್ಟಿಸುವ ಪ್ರಯತ್ನವೂ ಫೌಂಡೇಶನ್ ವತಿಯಿಂದ ನಡೆದಿತ್ತು. ಈ ಒಪ್ಪಂದ ಜಾರಿಗೆ ಬಂದಲ್ಲಿ ಚೀನಾದ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿತ್ತು. ಇದರಿಂದಾಗಿ ದೇಶೀಯ ಕೈಗಾರಿಕೆಗಳು ಮುಚ್ಚುವ ಭೀತಿಯೂ ಇತ್ತು. ಆದರೆ ಹಲವಾರು ತೊಡಕುಗಳಿಂದ ಒಪ್ಪಂದವು ಜಾರಿಗೆ ಬಂದಿಲ್ಲರಲಿಲ್ಲ.
ಕಾಂಗ್ರೇಸ್ ಪಕ್ಷದ ಅಂದಿನ ನಡೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಅಲ್ಲದೆ ಚೀನಾ ಸರಕಾರ ಒಪ್ಪಂದ ಜಾರಿಗೆ ತರುವ ಕಾರಣಕ್ಕಾಗಿಯೇ ಗಾಂಧೀ ಪರಿವಾರದ ಸಂಸ್ಥೆಗೆ ಭಾರೀ ಪ್ರಮಾಣದ ದೇಣಿಗೆ ನೀಡಿತೇ ಎನ್ನುವ ಅನುಮಾನಗಳನ್ನೂ ಹುಟ್ಟು ಹಾಕಿದೆ. ಗಮನಿಸಬೇಕಾದ ಅಂಶವೆಂದರೆ, ಅಂದು ಚೀನಾದ ಕಮ್ಯುನಿಷ್ಟ್ ಪಕ್ಷದ ಉಪಾಧ್ಯಕ್ಷರಾಗಿದ್ದ ಶೀ ಚಿಂಗ್ ಪಿನ್ ಜೊತೆ ಕಾಂಗ್ರೇಸ್ ಪಕ್ಷ ಉತ್ತಮ ಭಾಂಧವ್ಯವನ್ನು ಹೊಂದಿತ್ತು. ಅದೇ ವ್ಯಕ್ತಿ ಇದೀಗ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಚೀನಾ ಸರಕಾರ ಹಾಗೂ ಚೀನಾ ಸೇನೆಯಿಂದ ನಿರಂತರವಾಗಿ ಭಾರತ ವಿರೋಧ ನಿಲುವುಗಳನ್ನು ತಳೆದರೂ, ಕಾಂಗ್ರೇಸ್ ಪಕ್ಷ ಮಾತ್ರ ಚೀನಾ ವಿರುದ್ಧ ಹೇಳಿಕೆ ನೀಡದಿರುವುದರ ಹಿಂದೆ ಚೀನಾದ ಹಣದ ಕರಾಮತ್ತು ಅಡಗಿದೆಯೇ ಎನ್ನುವ ಸಂಶಯ ಮೂಡಲಾರಂಭಿಸಿದೆ.