LATEST NEWS
ರಾಜೇಶ್ ರೈ ಚಟ್ಲ ಅವರಿಗೆ “ದಕ್ಷಿಣ ಏಷ್ಯಾ ಲಾಡ್ಲಿ ಮಾಧ್ಯಮ ಪ್ರಶಸ್ತಿ”
ರಾಜೇಶ್ ರೈ ಚಟ್ಲ ಅವರಿಗೆ “ದಕ್ಷಿಣ ಏಷ್ಯಾ ಲಾಡ್ಲಿ ಮಾಧ್ಯಮ ಪ್ರಶಸ್ತಿ”
ಬೆಂಗಳೂರು ಅಕ್ಟೋಬರ್ 16: ಮುಂಬೈಯ ‘ಪಾಪ್ಯುಲೇಷನ್ ಫಸ್ಟ್’ ಸಂಸ್ಥೆ ಮತ್ತು ಇಂಟರ್ ನ್ಯಾಷನಲ್ ಅಡ್ವಟೈಸಿಂಗ್ ಅಸೋಸಿಯೇಷನ್ (ಐಎಎ) ಜಂಟಿಯಾಗಿ ನೀಡುವ ‘ದಕ್ಷಿಣ ಏಷ್ಯಾ ಲಾಡ್ಲಿ ಮಾಧ್ಯಮ ಪ್ರಶಸ್ತಿ–2017’ ಅನ್ನು ‘ಪ್ರಜಾವಾಣಿ’ಯ ಮುಖ್ಯ ವರದಿಗಾರ ರಾಜೇಶ್ ರೈ ಚಟ್ಲ ಅವರಿಗೆ ಹಿರಿಯ ಪತ್ರಕರ್ತ, ‘ದಿ ಪ್ರಿಂಟ್’ ಎಡಿಟರ್ ಇನ್ ಚೀಫ್ ಶೇಖರ್ ಗುಪ್ತ ಶುಕ್ರವಾರ ಪ್ರದಾನ ಮಾಡಿದರು.
ಮುಂಬೈಯ ನರಿಮನ್ ಪಾಯಿಂಟ್ ನಲ್ಲಿರುವ ಟಾಟಾ ಥಿಯೇಟರ್‌ನ ‘ನ್ಯಾಷನಲ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್’ (ಎನ್‌ಸಿಪಿಎ) ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಲಿಂಗ ತಾರತಮ್ಯ ಮತ್ತು ಲಿಂಗ ಸಂವೇದನೆ ವಿಷಯಕ್ಕೆ ಸಂಬಂಧಿಸಿದ ಅತ್ಯುತ್ತಮ ವರದಿಗೆ ದಕ್ಷಿಣ ಏಷ್ಯಾ ಮಟ್ಟದಲ್ಲಿ ಕಳೆದ ವರ್ಷದಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಇದು ಎರಡನೇ ಆವೃತ್ತಿ. ಕನ್ನಡದ ಪತ್ರಕರ್ತರೊಬ್ಬರಿಗೆ ಮೊದಲ ಬಾರಿಗೆ ಈ ಪ್ರಶಸ್ತಿ ಬಂದಿದೆ.
ದೇಶದ ನಾಲ್ಕು ವಲಯಗಳಿಂದ ಆಯ್ಕೆಯಾದ 83 ವರದಿಗಳಲ್ಲಿ ಅತ್ಯುತ್ತಮ ಎನಿಸಿದ 13 ವರದಿಗಳನ್ನು ಪಾಕಿಸ್ತಾನ, ಮಾರಿಷಸ್, ನೇಪಾಳ ದೇಶಗಳಿಂದ ಆಯ್ಕೆಯಾದ ವರದಿಗಳ ಜೊತೆಗೆ ದಕ್ಷಿಣ ಏಷ್ಯಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ದೇಶಗಳಿಂದ ಆಯ್ಕೆಯಾದ ಪತ್ರಕರ್ತರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯದಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಕುರಿತು ‘ದಂಧೆಯ ಒಡಲಾಳ” ಶೀರ್ಷಿಕೆಯಲ್ಲಿ ಬರೆದ ಸರಣಿ ವರದಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದೇ ವರದಿಗೆ ರಾಷ್ಟ್ರೀಯ ಮಟ್ಟದಲ್ಲಿ, ದಕ್ಷಿಣ ವಲಯ ಮಟ್ಟದ ಲಾಡ್ಲಿ ಮೀಡಿಯಾ ಪ್ರಶಸ್ತಿ ಸಿಕ್ಕಿತ್ತು. ವಲಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದೆಹಲಿಯಲ್ಲಿ ನಡೆದಿತ್ತು.
ಪಾಪ್ಯುಲೇಷನ್ ಫಸ್ಟ್ ಸಂಸ್ಥೆಯ ಟ್ರಸ್ಟಿ ಎಸ್.ವಿ. ಸಿಸ್ಟಾ ಮತ್ತು ನಿರ್ದೇಶಕಿ ಡಾ. ಎ.ಎಲ್. ಶಾರದಾ ಕಾರ್ಯಕ್ರಮದಲ್ಲಿ ಇದ್ದರು.