LATEST NEWS
ಕರಾವಳಿ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಕರಾವಳಿ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಮಂಗಳೂರು ಮಾರ್ಚ್ 19: ಉತ್ತರ ಕರ್ನಾಟಕದಲ್ಲಿ ಯಶಸ್ವೀ ಜನಾಶೀರ್ವಾದ ಯಾತ್ರೆ ನಡೆಸಿದ್ದ ಕಾಂಗ್ರೆಸ್ ಈಗ ಕರಾವಳಿಯಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲಿದ್ದಾರೆ. ಕರಾವಳಿಯಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಳೆಯಿಂದ ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. 20 ಮತ್ತು 21 ರಂದು ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎರಡನೇ ಹಂತದ ಯಾತ್ರೆ ನಡೆಸಲಿದ್ದಾರೆ.
ಎಐಸಿಸಿ ಅಧ್ಯಕ್ಷರನ್ನು ಸ್ವಾಗತಿಸಲು ಕರಾವಳಿ ಕಾಂಗ್ರೆಸ್ ಸಜ್ಜಾಗಿದೆ. ನಾಳೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ರಾಗಾ, ಎರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಮುಂಜಾನೆ 11.15ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ರಾಹುಲ್ ಗಾಂಧಿ ,ಅಲ್ಲಿಂದ ಉಡುಪಿ ಜಿಲ್ಲೆಯ ತೆಂಕ ಎರ್ಮಾಲ್ ನಲ್ಲಿ ರಾಜೀವ್ ಗಾಂಧಿ ರಾಜಕೀಯ ಸಂಸ್ಥೆ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಸೇವಾದಳದ ಕಾರ್ಯಕರ್ತರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಬಳಿಕ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ರೋಡ್ ಶೋ ಹಾಗು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ನಂತರ ಸುರತ್ಕಲ್ ಮತ್ತು ಮಂಗಳೂರಿಗೆ ತೆರಳಲಿದ್ದಾರೆ.
ಅಲ್ಲದೆ ರಾಹುಲ್ ಗಾಂಧಿಯವರ ಟೆಂಬಲ್ ರನ್ ಕರಾವಳಿಯಲ್ಲೂ ಕೂಡ ಮುಂದುವರೆಯಲಿದೆ. ಮೂರೂ ಧರ್ಮಗಳು ಪ್ರಬಲವಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೇಗುಲ, ಚರ್ಚ್ ಮತ್ತು ದರ್ಗಾಗಳಿಗೂ ರಾಹುಲ್ ಭೇಟಿ ನೀಡಲಿದ್ದಾರೆ. ಕರಾವಳಿಯಲ್ಲಿ ಮೂರು ಧರ್ಮದ ಮತದಾರರನ್ನು ಸೆಳೆಯಲು ಈ ಭೇಟಿ ನಿಗದಿ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ರಾಹುಲ್ ಮಂಗಳೂರಿನ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಮುನಿಸಿ ಕೊಂಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರನ್ನು ಸಂತೈಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ. ಆದರೆ ಪ್ರಶ್ನೆ ಈ ಭೇಟಿ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇರಲಿದ್ದಾರೆಯೇ ಎಂಬುದೇ ಕುತೂಹಲ. ಏಕೆಂದರೆ ಈ ಸಿ ಎಂ ಸಿದ್ದರಾಮಯ್ಯ ಮಂಗಳೂರು ಭೇಟಿ ಸಂದರ್ಭದಲ್ಲಿ ಈ ವರೆಗೆ ಕುದ್ರೋಳಿ ದೇವಾಲಯಕ್ಕೆ ಭೇಟಿ ನೀಡಲಿಲ್ಲ. ಈ ಕುರಿತು ಜನಾರ್ಧನ ಪೂಜಾರಿ ಹಲವಾರು ಬಾರಿ ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ಆದರೆ ಈ ಬಾರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನಡೆ ಏನಿರುತ್ತದೆ ಎಂಬುದು ಭಾರಿ ಕುತೂಹಲ ಮೂಡಿಸಿದೆ.