LATEST NEWS
ಗನ್ ಮ್ಯಾನ್ ವಾಪಾಸ್ ಪಡೆದ ಸರಕಾರ – ಭಯದಿಂದ ಬದುಕಬೇಕಾದ ಅನಿವಾರ್ಯತೆ – ರಹೀಂ ಉಚ್ಚಿಲ್
ಮಂಗಳೂರು ಎಪ್ರಿಲ್ 24 :ರಾಜ್ಯ ಸರಕಾರ ಕಳೆದ 11 ವರ್ಷಗಳಿಂದ ನೀಡಿದ್ದ ಗನ್ ಮ್ಯಾನ್ ಭದ್ರತೆಯನ್ನು ಹಿಂಪಡೆದಿದ್ದು, ಇದೀಗ ಭಯದಿಂದ ಬದುಕಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ.
ತಾಯಿ ಜತೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 2012 ರಲ್ಲಿ ನನ್ನ ಮೇಲೆ ಕೊಲೆ ಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಿಗೆ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಇನ್ನು ಆರೋಪಿಗಳು ಇದರ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅಲ್ಲಿ ತೀರ್ಪು ಬರುವ ಮೊದಲೇ ಗನ್ ಮ್ಯಾನ್ ಭದ್ರತೆ ವಾಪಸ್ ಪಡೆದುಕೊಳ್ಳಲಾಗಿದೆ. ಇದರಿಂದ ಭಯ ಮತ್ತು ನನಗೆ ಆತಂಕ ನನ್ನನ್ನು ಕಾಡುತ್ತಿದೆ ಎಂದರು. ನನ್ನ ತಾಯಿಯವರ ಮನವೊಲಿಸಿ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಆರೋಪಿಗಳು ಪ್ರಯತ್ನಿಸಿದ್ದಾರೆ.
ಅಷ್ಟೇ ಅಲ್ಲ ನನ್ನ ಗನ್‌ಮ್ಯಾನ್‌ಗೂ ಬೆದರಿಕೆ ಹಾಕಿದ್ದರು. ಇಷ್ಟೆಲ್ಲಾ ಇದ್ದರೂ ನನ್ನ ಗನ್‌ಮ್ಯಾನ್ ಹಿಂದಕ್ಕೆ ಪಡೆದುಕೊಂಡಿರುವುದು ಎಷ್ಟು ಸರಿ ಎಂದು ರಹೀಂ ಉಚ್ಚಿಲ್ ಪ್ರಶ್ನಿಸಿದ್ದಾರೆ. ನನಗೆ ಗನ್ ಮ್ಯಾನ್ ಭದ್ರತೆ ಮುಂದುವರೆಸುವಂತೆ ಡಿಸಿಪಿಯವರಿಗೆ ಮನವಿ ಮಾಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ನನ್ನ ಜೀವಕ್ಕೆ ಅಪಾಯ ಸಂಭವಿಸಿದರೆ ಯಾರೂ ಕಾರಣರಲ್ಲ, ನನ್ನ ಆಯುಷ್ಯವೇ ಕಾರಣವಾಗಿರುತ್ತದೆ ಎಂದು ಮಾರ್ಮಿಕವಾಗಿ ರಹೀಂ ಉಚ್ಚಿಲ್ ಹೇಳಿದ್ದಾರೆ.