FILM
ಡ್ರಗ್ಸ್ ಮಾಫಿಯಾ ಬೆಳ್ಳಂಬೆಳಗ್ಗೆ ನಟಿ ರಾಗಿಣಿ ಮನೆಯ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರವಾಗಿ ಇಂದು ಬೆಳ್ಳಂಬೆಳಗ್ಗೆ ನಟಿ ರಾಗಿಣಿ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಯಲಹಂಕದಲ್ಲಿರುವ ಅನನ್ಯ ಅಪಾರ್ಟ್‌ಮೆಂಟ್‌ಗೆ ಇಂದು ಮುಂಜಾನೆ ಸುಮಾರು 6:34ಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಎರಡು ಕಾರಿನಲ್ಲಿ ಒಟ್ಟು 6 ಜನ ಪೊಲೀಸ್ ಅಧಿಕಾರಿಗಳು ರಾಗಿಣಿ ಮನೆಯಲ್ಲಿ ದಾಳಿ ಮಾಡಿದ್ದಾರೆ. ಒಂದು ವೇಳೆ ಪ್ರಕರಣದ ಸಂಬಂಧ ಸೂಕ್ತ ದಾಖಲೆಗಳು ಸಿಕ್ಕಿದರೆ ರಾಗಿಣಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಸಿಸಿಬಿ ಪೊಲೀಸರ ಮುಂದೆ ಡ್ರಗ್ಸ್ ಮಾಫಿಯಾ ವಿಚಾರವಾಗಿ ರಾಗಿಣಿ ಆಪ್ತ ರವಿಶಂಕರ್ ಮಹತ್ವದ ಮಾಹಿತಿಗಳನ್ನು ಹೇಳಿದ್ದಾನೆ. ಈ ವೇಳೆ ರಾಗಿಣಿ ಮನೆಯಲ್ಲಿ ಪ್ರಕರಣ ಸಂಬಂಧ ಸಾಕ್ಷಿಗಳು ಇರೋದಾಗಿ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ಇಂದು ಕೂಡ ವಿಚಾರಣೆಯಿಂದ ವಿನಾಯಿತಿ ಕೇಳೋಕೆ ರಾಗಿಣಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಾಕ್ಷ್ಯಾ ನಾಶವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದು ಪೊಲೀಸರು ದಾಳಿ ನಡೆಸುತ್ತಿದ್ದಾರೆ.
ರಾಗಿಣಿ ದಾಳಿ ವೇಳೆ ಮನೆಯಲ್ಲಿಯೇ ಇದ್ದು, ಪೊಲೀಸರ ದಾಳಿ ಕಂಡು ಶಾಕ್ ಆಗಿದ್ದಾರೆ. ಸಿಸಿಬಿ ಅಧಿಕಾರಿಗಳು ಎಲ್ಲರ ಮೊಬೈಲ್ ವಶಕ್ಕೆ ಪಡೆದು ರಾಗಿಣಿ ಸೇರಿದಂತೆ ಮನೆ ಮಂದಿಯನ್ನು ಒಂದು ಕಡೆ ಕೂರಿಸಿದ್ದಾರೆ. ಯಾರೂ ಕೂಡ ಯಾರಿಗೂ ಫೋನ್ ಮಾಡದಂತೆ ಹೇಳಿದ್ದು, ಐವರು ಇನ್‌ಸ್ಪೆಕ್ಟರ್‌ಗಳು ಇಡೀ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿಗಳು ಬಂದಿದ್ದು, ಬಾಲ್ಕನಿಯಲ್ಲಿ ಪಾಟ್, ಗಿಡಗಳ ನಡುವೆ ಹುಡುಕಾಡುತ್ತಿದ್ದಾರೆ. ಎರಡು ಲ್ಯಾಪ್‍ಟಾಪ್, ನಾಲ್ಕು ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ನಟಿ ರಾಗಿಣಿ ಹೊರಗೆ ಬಂದು ಮಾಧ್ಯಮಗಳಿಗೆ ಕೈ ಬೀಸಿದ್ದಾರೆ. ಆಗ ತಕ್ಷಣ ಒಳಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದು, ರಾಗಿಣಿ ಮನೆಯೊಳಗೆ ಹೋಗಿದ್ದಾರೆ.
ದಾಳಿ ವೇಳೆ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಫ್ಲ್ಯಾಟ್ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಪಾರ್ಟ್‌ಮೆಂಟ್‌ನ ಎಂಟನೇ ಹಂತದಲ್ಲಿನ ರಾಗಿಣಿ ಮತ್ತೊಂದು ಫ್ಲ್ಯಾಟ್ ಹೊಂದಿದ್ದಾರೆ. ಇದೀಗ ಆ ಫ್ಲ್ಯಾಟ್ ಮೇಲೆ ಪೊಲೀಸರು ಕಣ್ಣಾಕಿದ್ದಾರೆ. ಆ ಮನೆಗೆ ಯಾರಿಗೂ ಎಂಟ್ರಿ ಇಲ್ಲ, ತೀರಾ ಆಪ್ತರು, ಸ್ನೇಹಿತರಿಗಷ್ಟೇ ಎಂಟ್ರಿ ಇತ್ತಂತೆ. ನಟಿ ರಾಗಿಣಿ ಎರಡನೇ ಮನೆಯ ಹೊಂದಿರುವ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದರು.