Connect with us

LATEST NEWS

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಚುನಾವಣೆ, ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸುವಂತೆ ಒತ್ತಡ….

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಚುನಾವಣೆ, ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸುವಂತೆ ಒತ್ತಡ !

ಮಂಗಳೂರು, ನವೆಂಬರ್ 26 : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಚುನಾವಣೆ ಡಿಸೆಂಬರ್ 5 ರಂದು ಪುತ್ತೂರಿನಲ್ಲಿ ನಡೆಯಲಿದ್ದು, ಈ ಸಂಬಂಧ ಮತದಾರರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಚುನಾವಣಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ತಾಲೂಕು ಘಟಕಕ್ಕೆ ನಡೆಯುವ ಚುನಾವಣೆಯ ಚುನಾವಣಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ನ.24 ರಂದು ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಯ್ಕೆ ಮಾಡಿದ ಮತದಾರರ ಪಟ್ಟಿಯಲ್ಲಿ ಒಟ್ಟು 25 ಸದಸ್ಯರಿಗೆ ಮತದಾನದ ಹಕ್ಕನ್ನು ನೀಡಲಾಗಿತ್ತು. ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಹಾಗೂ ತಾಲೂಕು ಘಟಕಗಳಿಂದ ಶಿಫಾರಸ್ಸು ಮಾಡಲಾದ ಸದಸ್ಯರಿಗೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ರಾಜ್ಯ ಸಂಘ ನೀಡಿದ್ದು, ನ.25 ರಂದು ಚುನಾವಣಾಧಿಕಾರಿ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಕಡಬ ತಾಲೂಕು ಪತ್ರಕರ್ತರ ಸಂಘದಿಂದ ಶಿಫಾರಸುಗೊಂಡ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಸದಸ್ಯರಾಗಿರುವ ಇಬ್ಬರ ಹೆಸರು ನಮೂದಾಗಿತ್ತು.

ಈ ಕುರಿತು ಮಾಹಿತಿ ಪಡೆದ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ  ಚುನಾವಣಾಧಿಕಾರಿ ಇಬ್ರಾಹಿಂ ಅಡ್ಕಸ್ಥಳ ಅವರನ್ನು ಸಂಪರ್ಕಿಸಿ ಪುತ್ತೂರು ತಾಲೂಕು ಘಟಕಕ್ಕೆ ನಡೆಸುವ ಚುನಾವಣಾ ಮತದಾರ ಪಟ್ಟಿಯಲ್ಲಿ ತಮ್ಮ ಸದಸ್ಯರಾದ ಹರೀಶ್.ಬಿ ಮತ್ತು ಸುಧಾಕರ್ ಆಚಾರ್ಯ ಇರುವ ಬಗ್ಗೆ ಮಾಹಿತಿ ನೀಡಿ ತಕ್ಷಣವೇ ಮತದಾರರ ಪಟ್ಡಿಯಿಂದ ಅವರ ಹೆಸರನ್ನು ಕೈ ಬಿಡುವಂತೆ ಮನವಿ ಮಾಡಿದ್ದರು.

*ಹೆಸರು ಉಳಿಸುವಂತೆ ಒತ್ತಡ*

ಮತದಾರ ಪಟ್ಟಿಯಲ್ಲಿ ಕಡಬ ತಾಲೂಕು ಸಂಘದ ಇಬ್ಬರು ಸದಸ್ಯರು ಇರುವುದನ್ನು ಖಚಿತಪಡಿಸಿಕೊಂಡ ಚುನಾವಣಾಧಿಕಾರಿ ಇಬ್ರಾಹಿಂ ಅಡ್ಕಸ್ಥಳ ಇಬ್ಬರು ಸದಸ್ಯರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲು ತೀರ್ಮಾನಿಸಿದ್ದರು. ಈ ನಡುವೆ ಕಡಬ ತಾಲೂಕು ಪತ್ರಕರ್ತರ ಸಂಘದ ಇಬ್ಬರು ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈ ಬಿಡದಂತೆ ಮತ್ತು ಅಕ್ರಮದಲ್ಲಿ ಸಹಕರಿಸುವಂತೆ ಹಲವು ಒತ್ತಡಗಳು ಚುನಾವಣಾಧಿಕಾರಿಗಳಿಗೆ ಬಂದ ಮಾಹಿತಿ ಲಭ್ಯವಾಗಿದೆ. ಅಕ್ರಮ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವೆ ಎಂದು ಹೇಳಿಕೊಳ್ಳುತ್ತಿರುವ ಪುತ್ತೂರು ಡಾ.ಯು.ಪಿ.ಶಿವಾನಂದ, ಸಂತೋಷ ಕುಮಾರ್ ಶಾಂತಿನಗರ, ಭಾಸ್ಕರ್ ರೈ ಕಟ್ಟ ಸೇರಿದಂತೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ನಿರಂತರವಾಗಿ ಚುನಾವಣಾಧಿಕಾರಿಗೆ ಇಬ್ಬರ ಹೆಸರನ್ನು ಕೈ ಬಿಡದಂತೆ ಒತ್ತಡ ಹೇರಿರುವ ಮಾಹಿತಿ ಲಭ್ಯವಾಗಿದೆ.

(ಚುನಾವಣಾಧಿಕಾರಿ ಇಬ್ರಾಹಿಂ ಅಡ್ಕಸ್ಥಳರಿಗೆ ಒತ್ತಡ ಹಾಕುತ್ತಿರುವ ಸ್ಥಳೀಯ ಪತ್ರಿಕೆಯ ಸಂತೋಷ್ ಕುಮಾರ್ ಶಾಂತಿನಗರ, ಶೇಖ್ ಜೈನುದ್ಧೀನ್ ಮತ್ತು ಲೋಕೇಶ್ ಬನ್ನೂರು)

ಒಂದು ಹಂತದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬಳಿಯೂ ಈ ವಿಚಾರವನ್ನು ಚರ್ಚಿಸಲಾಗಿತ್ತು. ಆದರೆ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್.ಎನ್.ಕೆ ತಮ್ಮ ಸಂಘದ ಸದಸ್ಯರನ್ನು ಅಕ್ರಮವಾಗಿ ಪುತ್ತೂರು ತಾಲೂಕು ಘಟಕಕ್ಕೆ ನಡೆಯುವ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳದಂತೆ ಪಟ್ಟು ಹಿಡಿದಿದ್ದಾರೆ‌. ಈ ಬಗ್ಗೆ ಜಿಲ್ಲಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಬಳಿಯೂ ತಮ್ಮ ಆಕ್ಷೇಪವನ್ನು ಸಲ್ಲಿಸಿದ್ದಾರೆ‌. ಗೊಂದಲಕ್ಕೆ ಮಧ್ಯಪ್ರವೇಶಿಸಿದ ಜಿಲ್ಕಾಧ್ಯಕ್ಷ ಶ್ರೀನಿವಾಸ್ ಇಂದಾಜೆ, ಮತದಾರರ ಪಟ್ಟಿಯಿಂದ ಕಡಬ ತಾಲೂಕು ಪತ್ರಕರ್ತರ ಸಂಘದ ಸದಸ್ಯರನ್ನು ಕೈ ಬಿಡದೇ ಹೋದಲ್ಲಿ ಪುತ್ತೂರು ಸಂಘವನ್ನು ಕಳೆದುಕೊಂಡಂತೆ ಕಡಬ ತಾಲೂಕು ಸಂಘವನ್ನೂ ಕಳೆದುಕೊಳ್ಳಬಹುದು ಎನ್ನುವ ವಿಚಾರವನ್ನು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಗಮನಕ್ಕೆ ತಂದ ಹಿನ್ನಲೆಯಲ್ಲಿ ಮತದಾರರ ಪಟ್ಟಿಯಿಂದ ಕಡಬ ತಾಲೂಕು ಘಟಕದ ಸದಸ್ಯರನ್ನು ಕೈಬಿಡಲಾಗಿದೆ. ಈ ಸಂಬಂಧ ಚುನಾವಣಾಧಿಕಾರಿಗಳು 23 ಸದಸ್ಯರಿರುವ ಮತದಾರರ ಪರಿಷ್ಕೃತ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಿದ್ದಾರೆ.

*ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಪುತ್ತೂರು ಸ್ಥಳೀಯ ಪತ್ರಿಕೆ*

ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕಕ್ಕೆ ನಡೆಯುವ ಚುನಾವಣೆಯನ್ನು ಪುತ್ತೂರಿನ ಲೋಕಲ್ ಪತ್ರಿಕೆಯೊಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ತಾಲೂಕು ಘಟಕಕ್ಕೆ ಚುನಾವಣೆ ಘೋಷಣೆಗೊಂಡ ಬಳಿಕ ಪುತ್ತೂರು ಪತ್ರಿಕಾಭವನದ ಸುತ್ತಮುತ್ತ ಓಡಾಡುತ್ತಿರುವ ಪತ್ರಿಕೆಗೆ ಸಂಬಂದಪಟ್ಟ ಸಿಬ್ಬಂದಿಗಳು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯ್ಕೆಯಾದ ಚುನಾವಣಾಧಿಕಾರಿ ಇಬ್ರಾಹಿಂ ಅಡ್ಕಸ್ಥಳ ಅವರಿಗೆ ಕಡಬ ಸದಸ್ಯರನ್ನು ಚುನಾವಣಾ ಮತದಾರರ ಪಟ್ಟಿಯಲ್ಲಿ ಇರುವಂತೆ ಒತ್ತಡ ಹಾಕುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ಅಲ್ಲದೆ ತಮ್ಮ ಪತ್ರಿಕೆಗಳಲ್ಲಿ ಪತ್ರಿಕಾಭವನದಲ್ಲಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿದ್ದ ಲೋಕಲ್ ಪತ್ರಿಕೆಯ ಸಿಬ್ಬಂದಿಗಳು ಇದೀಗ ಪತ್ರಿಕಾಭವನದ ಬಳಿಯೇ ಠಿಕಾಣಿ ಹೂಡುತ್ತಿದ್ದು, ಸ್ಥಳೀಯ ಪತ್ರಿಕೆ ಪ್ರಕಟಿಸಿದ ವರದಿ ಸುಳ್ಳೇ ಎನ್ನುವ ಗೊಂದಲವೂ ಸಾರ್ವಜನಿಕರನ್ನು ಕಾಡತೊಡಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *