Connect with us

    DAKSHINA KANNADA

    ಪುತ್ತೂರು: ಆರ್ಥಿಕ ಸಂಕಷ್ಟದಲ್ಲಿ ಬೀದಿ ನಾಯಿಗಳ ಅನ್ನದಾತ ರಾಜೇಶ್ ಬನ್ನೂರು…

    ಪುತ್ತೂರು, ಜುಲೈ 15: ಕಳೆದ 15 ವರ್ಷಗಳಿಂದ ಬೀದಿ ನಾಯಿಗಳ ಅನ್ನದಾತರಾಗಿ ದಾನಿಯೊಬ್ಬರು ಇದೀಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಪೇಪರ್ ಏಜೆಂಟ್ ಆಗಿಯೂ, ಜನಪ್ರತಿನಿಧಿಯೂ ಆಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ರಾಜೇಶ್ ಬನ್ನೂರು ಇದೀಗ ನಾಯಿಗಳ ಆರೈಕೆಗಾಗಿ‌ ದಾನಿಗಳ ಸಹಾಯ ಯಾಚಿಸುತ್ತಿದ್ದಾರೆ.

    ಪ್ರತಿದಿನವೂ 150 ಕ್ಕೂ ಮಿಕ್ಕಿದ ನಾಯಿಗಳಿಗೆ ಆಹಾರ ಸೇರಿದಂತೆ ಆರೋಗ್ಯವನ್ನೂ ನೋಡಿಕೊಳ್ಳುತ್ತಿರುವ ಇವರು ದಿನವೊಂದಕ್ಕೆ ನಾಯಿಗಳಿಗಾಗಿ 1500 ರೂಪಾಯಿಗಳನ್ನು ವ್ಯಯಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ನಾಯಿಗಳ ಸಂಕಷ್ಟ ತಾಳಲಾರದೆ ಅನ್ನ ನೀಡುವ ಕಾರ್ಯವನ್ನು ಆರಂಭಿಸಿರುವ ರಾಜೇಶ್ ಬನ್ನೂರು ಆಹಾರ ನೀಡುವ ಕೆಲಸವನ್ನು ನಿಲ್ಲಿಸಲು ತೀರ್ಮಾನಿಸಿದ್ದಾರೆ.

    ಸಾಕು ಪ್ರಾಣಿಗಳನ್ನು ಸಾಕುವ ಜನರ ನಿರ್ಲಕ್ಷ್ಯದಿಂದಾಗಿ ಬೀದಿಗೆ ಬೀಳುವ ನಾಯಿಗಳನ್ನು ಕಂಡು ಕಾಣದಂತೆಯೇ ಇರುವವರು ಹೆಚ್ಚು. ಆದರೆ ರಕ್ಷಿತ್ ಶೆಟ್ಟಿಯವರ ಚಾರ್ಲಿ 777 ಚಲನಚಿತ್ರ ತೆರೆಗೆ ಬಂದ ಬಳಿಕ ನಾಯಿಗಳ ಮೇಲಿನ ಕಾಳಜಿ ಕೊಂಚ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಆದರೆ ಚಾರ್ಲಿ ಸಿನಿಮಾ ಬರುವ ಮೊದಲೇ ಅಂದರೆ ಸುಮಾರು 15 ವರ್ಷಗಳ ಹಿಂದೆಯೇ ಈ ಬೀದಿ ನಾಯಿಗಳನ್ನು ತಮ್ಮ ಮನೆಯ ಸದಸ್ಯರಂತೆ ಕಾಣುವ ಅಪರೂಪದ ಅನ್ನದಾತ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ರಾಜೇಶ್ ಬನ್ನೂರು.

    ಪೇಪರ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿರುವ ರಾಜೇಶ್ ಬನ್ನೂರು ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಪುತ್ತೂರು ಪುರಸಭೆ ಇರುವ ಸಮಯದಲ್ಲಿ ಹಲವು ಬಾರಿ ಪುರಸಭೆ ಸದಸ್ಯರಾಗಿ ಮತ್ತು ಒಂದು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ಸದ್ಯ ರಾಜಕೀಯದಿಂದ ಕೊಂಚ ದೂರ ಉಳಿದು ತನ್ನ ಪೇಪರ್ ಏಜೆಂಟ್ ಕೆಲಸ ನಿರ್ವಹಿಸುತ್ತಿರುವ ರಾಜೇಶ್ ಬನ್ನೂರಿಗೆ ಪುತ್ತೂರು ನಗರದಾದ್ಯಂತ ಪರಿಚಯಸ್ಥ ನಾಯಿಗಳಿವೆ.

    ಈ ಕಾರಣಕ್ಕಾಗಿಯೇ ರಾಜೇಶ್ ಬನ್ನೂರು ತಿರುಗಾಡಿದ ಕಡೆಗಳಲ್ಲೆಲ್ಲಾ ನಾಯಿಗಳ ದಂಡು ಇವರನ್ನು ಸುತ್ತುವರಿಯುತ್ತೆ. ಈ ರೀತಿಯಾದ ಪರಿಚಯ ನಾಯಿಗಳಿಗೆ ಆಹಾರ, ಆರೈಕೆ ನೀಡುವ ತನಕ ಬೆಳೆದಿದೆ. ಸುಮಾರು 15 ವರ್ಷಗಳಿಂದ ಬೆಳೆದು ಬಂದ ಈ ಸ್ನೇಹಾಚಾರವನ್ನು ಬಿಟ್ಟು ಬರಲಾರದಂತಹ ಸಂಕಷ್ಟದಲ್ಲಿ ರಾಜೇಶ್ ಇದೀಗ ಸಿಲುಕಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *